ಪೌರತ್ವ ಕಾಯ್ದೆ ವಿರುದ್ಧ ಆಕ್ರೋಶ: ಅಸ್ಸಾಂನಲ್ಲಿ ಹಲವೆಡೆ ಬಿಜೆಪಿ, ಆರೆಸ್ಸೆಸ್ ಕಚೇರಿಗಳ ಮೇಲೆ ದಾಳಿ

Update: 2019-12-19 05:44 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿ ಈ ಹೊಸ ಕಾಯ್ದೆಯಿಂದ ಅಸ್ಸಾಂ ರಾಜ್ಯದ ಜನತೆಗೆ ಯಾವುದೇ ಸಮಸ್ಯೆಯಾಗದು ಎಂದು ಭರವಸೆ ನೀಡಿದರೂ ಪ್ರತಿಭಟನಾಕಾರರ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ.

ಹಿಂಸೆ ಇಂದೂ ಮುಂದುವರಿದಿದ್ದು ದಿಬ್ರೂಘರ್, ಸದ್ಯಾ ಹಾಗೂ ತೇಝ್‍ ಪುರ್ ಎಂಬಲ್ಲಿನ ಆರೆಸ್ಸೆಸ್ ಕಚೇರಿಗಳ ಮೇಲೆ ಪ್ರತಿಭಟನಾನಿರತರು ದಾಳಿ ನಡೆಸಿದ್ದಾರೆ. ತೇಝ್‍ ಪುರ್‍ ನಲ್ಲಿನ ಬಿಜೆಪಿ ಕಚೇರಿಯೂ ದಾಳಿಗೊಳಗಾಗಿದೆ.

ಪ್ರತಿಭಟನಾಕಾರರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ಹಾಗೂ ಕೇಂದ್ರ ಸಚಿವ ರಾಮೇಶ್ವರ್ ತೆಲಿ ಅವರ ನಿವಾಸಗಳತ್ತವೂ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ದಿಬ್ರೂಘರ್‍ನಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಹೇರಲಾಗಿದೆ.

ಅಸ್ಸಾಂನಲ್ಲಿ ಐದು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಹಿಂಸೆಯ ಘಟನೆಗಳ ಹಿನ್ನೆಲೆಯಲ್ಲಿ ವಿಮಾನಯಾನವೂ ಬಾಧಿತವಾಗಿದೆ. ಇಂಡಿಗೋ ಏರ್ ಲೈನ್ಸ್ ದಿಬ್ರೂಘರ್‍ಗೆ ಇಂದು ತೆರಳಬೇಕಿದ್ದ ಎಲ್ಲಾ ವಿಮಾನಸೇವೆಗಳನ್ನು ರದ್ದುಗೊಳಿಸಿದೆ. ವಿಸ್ತಾರ ಹಾಗೂ ಗೋ ಏರ್ ಕೂಡ ಗುವಾಹಟಿ ಹಾಗೂ ದಿಬ್ರೂಘರ್‍ ಗೆ ವಿಮಾನಸೇವೆಗಳನ್ನು ರದ್ದುಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News