ಡಿ.19ರಂದು ಪೌರತ್ವ ಮಸೂದೆ ವಿರೋಧಿಸಿ ಎಡಪಕ್ಷಗಳಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

Update: 2019-12-19 05:42 GMT

ಹೊಸದಿಲ್ಲಿ,ಡಿ.12: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಎಡಪಕ್ಷಗಳು ಡಿ.19ರಂದು ರಾಷ್ಟ್ರವ್ಯಾಪಿ ಜಂಟಿ ಪ್ರತಿಭಟನೆಯನ್ನು ನಡೆಸಲಿವೆ.

ಮಸೂದೆಯು ಸಂವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಮತ್ತು ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಯನ್ನು ನಾಶಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಸಿಪಿಐ,ಸಿಪಿಎಂ,ಸಿಪಿಐ (ಎಂಎಲ್)-ಲಿಬರೇಷನ್,ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತು ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಗುರುವಾರ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ವ್ಯಕ್ತಿಯ ಧರ್ಮಕ್ಕೂ ಪೌರತ್ವಕ್ಕೂ ನಂಟು ಕಲ್ಪಿಸಿರುವ ಈ ಮಸೂದೆಯನ್ನು ಎಡಪಕ್ಷಗಳು ಬಲವಾಗಿ ವಿರೋಧಿಸುತ್ತವೆ. ದೇಶದಲ್ಲಿ ಕೋಮು ವಿಭಜನೆಯನ್ನು ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸಲು ಈ ಮಸೂದೆಯು ಉದ್ದೇಶಿಸಿದ್ದು,ಇದು ನಮ್ಮ ದೇಶದ ಏಕತೆ ಮತ್ತು ಅಖಂಡತೆಗೆ ಅಪಾಯಕಾರಿಯಾಗಿದೆ ಎಂದಿರುವ ಹೇಳಿಕೆಯು,ಮಸೂದೆಯ ಅಂಗೀಕಾರದೊಂದಿಗೆ ಸರಕಾರವು ಘೋಷಿಸಿರುವಂತೆ ರಾಷ್ಟ್ರವ್ಯಾಪಿ ಎನ್‌ಆರ್‌ಸಿಯೂ ಸೇರಿದರೆ ಅದು ಭಾರತೀಯ ಗಣತಂತ್ರದ ಜಾತ್ಯತೀತ ಸ್ವರೂಪವನ್ನು ಆರೆಸ್ಸೆಸ್‌ನ ರಾಜಕೀಯ ಯೋಜನೆಯಾದ ‘ಹಿಂದುತ್ವ ರಾಷ್ಟ್ರ ’ವನ್ನಾಗಿ ಬದಲಿಸಲಿದೆ ಎಂದು ತಿಳಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ರಾಮಪ್ರಸಾದ ಬಿಸ್ಮಿಲ್ ಅವರನ್ನು 1927 ಡಿಸೆಂಬರ್ 19ರಂದು ಗೋರಖಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿದ್ದು,ಎಡಪಕ್ಷಗಳು ತಮ್ಮ ಪ್ರತಿಭಟನೆಗೆ ಅದೇ ದಿನವನ್ನು ಆಯ್ಕೆ ಮಾಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News