ಭಾರತದ ವಿರುದ್ಧ ಎಫ್-16 ಯುದ್ಧವಿಮಾನ ಬಳಕೆ: ಪಾಕ್ ವಾಯುಪಡೆ ಮುಖ್ಯಸ್ಥರಿಗೆ ಛೀಮಾರಿ ಹಾಕಿದ ಅಮೆರಿಕ

Update: 2019-12-12 18:03 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಡಿ. 12: ಎಫ್-16 ಯುದ್ಧ ವಿಮಾನಗಳ ದುರ್ಬಳಕೆ ಮಾಡಿರುವುದಕ್ಕಾಗಿ ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥರಿಗೆ ಅಮೆರಿಕ ಆಗಸ್ಟ್‌ನಲ್ಲಿ ಛೀಮಾರಿ ಹಾಕಿದೆ ಎಂದು ‘ಯುಎಸ್ ನ್ಯೂಸ್’ ಬುಧವಾರ ವರದಿ ಮಾಡಿದೆ.

ಫೆಬ್ರವರಿ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಾಯು ಪಡೆಗಳ ನಡುವೆ ನಡೆದ ಸಂಘರ್ಷದ ವೇಳೆ ಪಾಕಿಸ್ತಾನವು ಎಫ್-16 ಯುದ್ಧ ವಿಮಾನಗಳನ್ನು ಬಳಸಿತ್ತು. ಈ ಸಂದರ್ಭದಲ್ಲಿ ಭಾರತವು ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿತ್ತು.

ಈ ವಿಷಯದಲ್ಲಿ ಆಗಸ್ಟ್‌ನಲ್ಲಿ ಅಂದಿನ ವಿದೇಶಾಂಗ ಇಲಾಖೆಯ ಅಧೀನ ಕಾರ್ಯದರ್ಶಿ ಆ್ಯಂಡ್ರಿಯಾ ಥಾಂಪ್ಸನ್ ಪಾಕಿಸ್ತಾನದ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಮುಜಾಹಿದ್ ಅನ್ವರ್ ಖಾನ್‌ಗೆ ಪತ್ರ ಬರೆದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಪ್ರಾಣ ಕಳೆದುಕೊಂಡ ಬಳಿಕ, ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದೆಯೆನ್ನಲಾದ ಭಯೋತ್ಪಾದಕ ತರಬೇತಿ ಶಿಬಿರವೊಂದರ ಮೇಲೆ ಭಾರತೀಯ ವಾಯು ಪಡೆ ವೈಮಾನಿಕ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾರವಾಗಿ ಮಾರನೇ ದಿನ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಾಗ, ಭಾರತೀಯ ಯುದ್ಧ ವಿಮಾನಗಳು ಪ್ರತಿರೋಧ ತೋರಿದವು. ಈ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ವಿಮಾನವೊಂದನ್ನು ಉರುಳಿಸುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾದರು.

ಅಮೆರಿಕ ಕೊಟ್ಟಿರುವ ಎಫ್-16 ಯುದ್ಧ ವಿಮಾನಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬಳಸುವ ಮೂಲಕ ಪಾಕಿಸ್ತಾನವು ಎಫ್-16 ನಿಯೋಜನೆಗೆ ಸಂಬಂಧಿಸಿದ ಶರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಬಾಲಕೋಟ್ ದಾಳಿ ಹಾಗೂ ಪಾಕಿಸ್ತಾನದ ಪ್ರತಿ ದಾಳಿಯ ಬಗ್ಗೆ ಪತ್ರದಲ್ಲಿ ಯಾವುದೇ ನೇರ ಪ್ರಸ್ತಾಪವನ್ನು ಮಾಡಲಾಗಿಲ್ಲವಾದರೂ, ಎಫ್-16 ಯುದ್ಧ ವಿಮಾನಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ದುರ್ಬಳಕೆ ಮಾಡಿರುವುದಕ್ಕಾಗಿ ಅದು ಎಚ್ಚರಿಕೆ ನೀಡಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News