ನಾಗಮೋಹನ್‌ದಾಸ್ ವರದಿಯಿಂದ ಸಾಮಾಜಿಕ ನ್ಯಾಯ ಸಿಗುವಂತಾಗಲಿ: ಪ್ರಸನ್ನಾನಂದಪುರಿ ಸ್ವಾಮೀಜಿ

Update: 2019-12-12 16:39 GMT

ಬೆಂಗಳೂರು, ಡಿ.12: ಎಸ್ಸಿ, ಎಸ್ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ಪರಾಮರ್ಶೆ ನಡೆಸುತ್ತಿರುವ ನ್ಯಾ.ನಾಗಮೋಹನ ದಾಸ್, ತಮ್ಮ ವರದಿಯ ಮೂಲಕ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿಸಲಿ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶಿಸಿದ್ದಾರೆ.

ನಗರದ ಯವನಿಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸುವ ಕುರಿತಂತೆ ನ್ಯಾ.ನಾಗಮೋಹನ ದಾಸ್ ಆಯೋಗದೊಂದಿಗೆ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿಯವರೆಗೂ ಹಣ ಹಾಗೂ ಜಾತಿ ಬಲವುಳ್ಳವರು ಮಾತ್ರ ಸಂವಿಧಾನದ ಸೌಲಭ್ಯವನ್ನು ಪಡೆದಿದ್ದಾರೆ. ದಲಿತ ಸಮುದಾಯಕ್ಕೆ ಅದು ಮರೀಚಿಕೆಯಾಗಿಯೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಂದು ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಸಿಗಬೇಕೆಂಬುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರವರ ಆಶಯವಾಗಿತ್ತು. ಆದರೆ, ವಾಸ್ತವವಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಇಲ್ಲಿವರೆಗೂ ಸಿಗಲಿಲ್ಲ. ಮುಂದಿನ ದಿನಗಳಲ್ಲಾದರು ನಮಗೆ ನ್ಯಾಯ ಸಿಗಲಿದೆ ಎಂಬ ಆಶಾಭಾವನೆಯಲ್ಲಿದ್ದೇವೆಂದು ಅವರು ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ನಿಗದಿ ಪಡಿಸಬೇಕೆಂಬುದು ದಲಿತ ಸಮುದಾಯ ಹಲವು ದಶಕಗಳಿಂದ ಒಕ್ಕೊರಲಿನಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ನಮ್ಮ ಹೋರಾಟಕ್ಕೆ ಮಣಿದಿರುವ ಈ ಹಿಂದಿನ ಸಮ್ಮಿಶ್ರ ಸರಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಪರಾಮರ್ಶಿಸಿ ವರದಿ ನೀಡುವಂತೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ನೇಮಿಸಿದೆ. ಈ ಆಯೋಗವನ್ನು ವಾಲ್ಮೀಕಿ ಸಮುದಾಯ ಸೇರಿದಂತೆ ಎಲ್ಲ ಸಂಘ, ಸಂಸ್ಥೆಗಳು ಬೆಂಬಲಿಸಿದ್ದು, ನಮಗೆ ಸಂವಿಧಾನಬದ್ಧ ನ್ಯಾಯ ಸಿಗಲಿದೆ ಎಂದು ಅವರು ತಿಳಿಸಿದರು.

ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ದೇಶದಲ್ಲಿರುವ ಎಲ್ಲ ಜಾತಿ, ಸಮುದಾಯಗಳಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಕ್ಕಾಗ ಮಾತ್ರ ಭಾರತ ನಿಜವಾಗಿ ಸ್ವತಂತ್ರವಾಗಿದೆ ಎಂಬುದನ್ನು ಖಾತ್ರಿ ಪಡಿಸಬಹುದೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಅವರ ಮಾತನ್ನು ಈಗ ಹೋಲಿಸಿ ನೋಡಿದರೆ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆಯೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಎಸ್ಸಿ ಸಮುದಾಯದಲ್ಲಿಯೆ 101 ಉಪಜಾತಿಗಳಿವೆ. ಎಸ್ಟಿಯಲ್ಲಿ 50ಕ್ಕೂ ಹೆಚ್ಚು ಉಪಜಾತಿಗಳಿವೆ. ಇವುಗಳಲ್ಲಿರುವ ಶೇ.90ರಷ್ಟು ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸಂವಿಧಾನದ ನ್ಯಾಯಬದ್ಧ ಹಕ್ಕುಗಳು, ಸೌಲಭ್ಯಗಳು ಸಿಕ್ಕಿಲ್ಲ. ಸ್ವಾತಂತ್ರ ಪೂರ್ವದಲ್ಲಿ ಹೇಗೆ ಬದುಕುತ್ತಿದ್ದವೋ, ಈಗಲೂ ಅದೇ ರೀತಿ ಬದುಕುಗಳನ್ನು ನಡೆಸುತ್ತಿವೆ. ಹಾಗಾದರೆ ಮೀಸಲಾತಿ ಯಾರಿಗೆ ಲಾಭ ತಂದುಕೊಟ್ಟಿದೆ ಎಂಬುದನ್ನು ಪರಾಮರ್ಶಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದು ಸರಿಯಷ್ಟೆ. ಆದರೆ, ಅದು ನ್ಯಾಯಯುತವಾಗಿ ಫಲಾನುಭವಿಗಳಿಗೆ ತಲುಪುತ್ತದೆಯೇ, ಅಲ್ಲಿನ ತೊಡುಕುಗಳೇನು, ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಿ, ಮೀಸಲಾತಿ ಸೌಲಭ್ಯ ಎಲ್ಲರಿಗೂ ತಲುಪುವಂತೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ವಕೀಲ ಅನಂತ್‌ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಲ್ಮೀಕಿ ಸಮುದಾಯದ ನರಸಿಂಹಯ್ಯ, ಬಸವರಾಜ್ ನಾಯಕ್, ಎಲ್.ಎನ್.ಮೂರ್ತಿ ಹಲವರು ಉಪಸ್ಥಿತರಿದ್ದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಪರಾಮರ್ಶಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ನನ್ನ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದ್ದು, ಅಲ್ಲಿ ಅನುಸರಿಸಿರುವ ಕ್ರಮಗಳು ಹಾಗೂ ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿರುವ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಜೊತೆಗೂ ಚರ್ಚೆ ನಡೆಸುತ್ತಿದ್ದೇವೆ. ನಾಡಿನ ಸಾಹಿತಿ, ಚಿಂತಕರು, ಸಂವಿಧಾನ ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಇವೆಲ್ಲವನ್ನು ಪರಾಮರ್ಶಿಸಿ ನಿಗದಿತ ವೇಳೆಯಲ್ಲಿ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.

-ನಾಗಮೋಹನ್ ದಾಸ್, ಅಧ್ಯಕ್ಷ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತ ಪರಾಮರ್ಶೆ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News