ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

Update: 2019-12-12 17:25 GMT

ದಿಂಡಿಗಲ್, ಡಿ.12: ದಿನದ ಅಂತಿಮ ಓವರ್‌ನಲ್ಲಿ ತಮಿಳುನಾಡಿನ ಕೊನೆಯ ವಿಕೆಟ್ ಸೇರಿದಂತೆ 8 ವಿಕೆಟ್ ಗೊಂಚಲು ಕಬಳಿಸಿದ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್‌ರ ಅಮೋಘ ಬೌಲಿಂಗ್ ನೆರವಿನಿಂದ ರಣಜಿ ಟ್ರೋಫಿ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ರೋಚಕ ಜಯ ಸಾಧಿಸಿದೆ.

ನಾಲ್ಕನೇ ಹಾಗೂ ಅಂತಿಮ ದಿನವಾದ ಗುರುವಾರ ಪಂದ್ಯ ಗೆಲ್ಲಲು 181 ರನ್ ಗುರಿ ಬೆನ್ನಟ್ಟುತ್ತಿದ್ದ ತಮಿಳುನಾಡು ತಂಡವನ್ನು 63.3 ಓವರ್‌ಗಳಲ್ಲಿ 154 ರನ್‌ಗೆ ನಿಯಂತ್ರಿಸಿದ ಕರ್ನಾಟಕ 26 ರನ್‌ಗಳ ರೋಚಕ ಜಯ ದಾಖಲಿಸಿತು. ವ್ನಿೇಶ್ ವಿಕೆಟ್ ಉರುಳಿದ ತಕ್ಷಣ ಕರ್ನಾಟಕ ಪಾಳಯದಲ್ಲಿ ಸಂಭ್ರಮಾಚರಣೆ ಕಂಡುಬಂತು.

 ಈ ಮೂಲಕ ರಣಜಿ ಟ್ರೋಫಿ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದ ಕರ್ನಾಟಕ ಆರು ಅಂಕ ಗಳಿಸಿತು. ಉತ್ತಮ ಹೋರಾಟ ನೀಡಿದ ಹೊರತಾಗಿಯೂ ತಮಿಳುನಾಡು ಶೂನ್ಯ ಅಂಕ ಗಳಿಸಿತು. ಡಿ.17ರಿಂದ ತಿರುನಲ್ವೇಲಿಯಲ್ಲಿ ಹಿಮಾಚಲ ಪ್ರದೇಶವನ್ನು ಎದುರಿಸಲಿದೆ.

 ಈ ಋತುವಿನಲ್ಲಿ ಮೂರನೇ ಬಾರಿ ಕರ್ನಾಟಕ ತಂಡ ತಮಿಳುನಾಡಿಗೆ ಆಘಾತ ನೀಡಿದೆ. ವಿಜಯ ಹಝಾರೆ ಏಕದಿನ ಟೂರ್ನಿ ಹಾಗೂ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲೂ ಉಭಯ ತಂಡಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದ್ದು, ಎರಡೂ ಸಂದರ್ಭದಲ್ಲಿ ಕರ್ನಾಟಕ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಪಡೆದಿತ್ತು.

ಟೆಸ್ಟ್ ಸ್ಟಾರ್ ಆರ್.ಅಶ್ವಿನ್(4-46)ಅಪೂರ್ವ ಬೌಲಿಂಗ್ ಬಲದಿಂದ ತಮಿಳುನಾಡು ತಂಡ ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕವನ್ನು ಕೇವಲ 151 ರನ್‌ಗೆ ನಿಯಂತ್ರಿಸಿ ಪಂದ್ಯ ಗೆಲ್ಲುವ ವಿಶ್ವಾಸ ಹೆಚ್ಚಿಸಿಕೊಂಡಿತು. 5 ವಿಕೆಟ್ ನಷ್ಟಕ್ಕೆ 89ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ಒಂದು ಹಂತದಲ್ಲಿ 119 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ ಕೆಳ ಕ್ರಮಾಂಕದಲ್ಲಿ ಸಿಡಿದೆದ್ದ ಗೌತಮ್(22 ರನ್, 33 ಎಸೆತ, 2 ಬೌಂಡರಿ)ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಮುಕುಂದ್(42) ಹಾಗೂ ಮುರಳಿ ವಿಜಯ್(15)ಮೊದಲ ವಿಕೆಟ್‌ಗೆ ಕ್ಷಿಪ್ರವಾಗಿ 49 ರನ್ ಸೇರಿಸಿ ತಮಿಳುನಾಡಿಗೆ ಉತ್ತಮ ಆರಂಭ ಒದಗಿಸಿದರು. ಆದರೆ, 4 ರನ್ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಬದಲಿ ಫೀಲ್ಡರ್ ಆರ್.ಸಮರ್ಥ್ ಅವರು ವಿಜಯ್ ಅವರನ್ನು ರನೌಟ್ ಮಾಡಿ ತಮಿಳುನಾಡಿಗೆ ಆರಂಭಿಕ ಆಘಾತ ನೀಡಿದರು. ಬಿ.ಅಪರಾಜಿತ್(0) ಹಾಗೂ ಆರ್.ಅಶ್ವಿನ್(2)ಗೌತಮ್ ಸ್ಪಿನ್ ಬಲೆಗೆ ಬಿದ್ದಾಗ ತಮಿಳುನಾಡಿನ ಸ್ಕೋರ್ 53ಕ್ಕೆ3.

ತಮಿಳುನಾಡು ಭೋಜನ ವಿರಾಮದ ವೇಳೆಗೆ ಗೆಲುವಿನ ಹಾದಿಯಲ್ಲಿತ್ತು. ಆರಂಭಿಕ ಆಟಗಾರ ಅಭಿನವ ಮುಕುಂದ್(42, 76 ಎಸೆತ, 6 ಬೌಂಡರಿ)ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದ್ದರು.

ಕೊನೆಯ ಸೆಶನ್‌ನ ಆರಂಭದಲ್ಲಿ ತಮಿಳುನಾಡಿನ ಗೆಲುವಿಗೆ 31 ಓವರ್‌ಗಳಲ್ಲಿ 97 ರನ್ ಅಗತ್ಯವಿತ್ತು. 6 ವಿಕೆಟ್‌ಗಳು ಕೈಯಲ್ಲಿದ್ದವು. ವಿಜಯ ಶಂಕರ್(5) ಹಾಗೂ ದಿನೇಶ್ ಕಾರ್ತಿಕ್(17)ಗೌತಮ್ ಸ್ಪಿನ್ ಮೋಡಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಔಟಾದಾಗ ಪಂದ್ಯ ಕರ್ನಾಟಕದ ಪರ ವಾಲಿತು. ಕೇವಲ 3 ಎಸೆತಗಳ ಆಟ ಬಾಕಿ ಇರುವಾಗ ಗೌತಮ್ ಅವರು ವ್ನಿೇಶ್(4)ವಿಕೆಟನ್ನು ಉರುಳಿಸಿ ತಮಿಳುನಾಡಿನ 2ನೇ ಇನಿಂಗ್ಸ್ ಗೆ ತೆರೆ ಎಳೆದರು. 60 ರನ್‌ಗೆ 8 ವಿಕೆಟ್‌ಗಳನ್ನು ಉರುಳಿಸಿದ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News