ರೇಪ್ ಇನ್ ಇಂಡಿಯಾ ಹೇಳಿಕೆ ನೀಡಿದ ರಾಹುಲ್‌ಗೆ ಶಿಕ್ಷೆಯಾಗಬೇಕು: ಸ್ಮೃತಿ ಇರಾನಿ

Update: 2019-12-13 07:11 GMT

ಹೊಸದಿಲ್ಲಿ, ಡಿ.13: ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ದೇಶದಲ್ಲೆಡೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ‘ರೇಪ್ ಇನ್ ಇಂಡಿಯಾ’ ಎಂಬ ಹೇಳಿಕೆ ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಎಡೆ ಮಾಡಿಕೊಟ್ಟಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಪ್ರಮುಖ ಸಚಿವರು ರಾಹುಲ್ ಗಾಂಧಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಕ್ಷಮೆ ಕೋರುವಂತೆ ಒತ್ತಾಯಿಸಿದ್ದಾರೆ.

‘‘ಇತಿಹಾಸದಲ್ಲಿ ಇದೇ ಮೊದಲ ಬಾರಿ ನಾಯಕನೊಬ್ಬ ಭಾರತೀಯ ಮಹಿಳೆಯನ್ನು ಅತ್ಯಾಚಾರ ಮಾಡಬೇಕೆಂದು ಕರೆ ನೀಡುತ್ತಿದ್ದಾನೆ. ಇದು ರಾಹುಲ್ ಗಾಂಧಿ ದೇಶಕ್ಕೆ ನೀಡುತ್ತಿರುವ ಸಂದೇಶವಾಗಿದೆಯೇ?ಇಂತಹ ಹೇಳಿಕೆ ನೀಡಿರುವ ರಾಹುಲ್‌ಗೆ ಶಿಕ್ಷೆಯಾಗಲೇಬೇಕು ಎಂದು ಇರಾನಿ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹೇಳುತ್ತಿದ್ದಾರೆ ರೇಪ್ ಇನ್ ಇಂಡಿಯಾ ಎಂದು. ಇದರರ್ಥ ಏನು? ಹೊರಗಿನವರಿಗೆ ಭಾರತಕ್ಕೆ ಬಂದು ಮಹಿಳೆಯ ರೇಪ್ ಮಾಡಿ ಎಂದು ಅವರು ಹೇಳುತ್ತಿದ್ದಾರೆಯೇ? ಇದು ಸರಿಯೇ? ಎಂದು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

 ಜಾರ್ಖಂಡ್‌ನ ಗೊಡ್ಡಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘‘ನರೇಂದ್ರ ಮೋದಿ ಹೇಳುತ್ತಿದ್ದಾರೆ ಮೇಕ್ ಇನ್ ಇಂಡಿಯಾ ಎಂದು. ಆದರೆ, ಇಂದಿನ ದಿನಗಳಲ್ಲಿ ಎಲ್ಲೇ ನೋಡಿದರೂ ‘ರೇಪ್ ಇನ್ ಇಂಡಿಯಾ‘ ಆಗಿದೆ. ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಪಕ್ಷದ(ಬಿಜೆಪಿ)ಶಾಸಕನೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಅಪಘಾತ ಮಾಡಿ ಕೊಲ್ಲಲು ಯತ್ನಿಸುತ್ತಾನೆೆ. ಆದರೆ, ನರೇಂದ್ರ ಮೋದಿ ಈ ಬಗ್ಗೆ ಒಂದೇ ಒಂದು ಮಾತನಾಡಿಲ್ಲ’’ ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News