ಮಕ್ಕಳಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಮನಸ್ಥಿತಿ ಬೆಳೆಯಬೇಕು: ಸಚಿವ ಸುರೇಶ್‌ ಕುಮಾರ್

Update: 2019-12-13 12:42 GMT

ಬೆಂಗಳೂರು, ಡಿ.13: ಮಕ್ಕಳಲ್ಲಿ ಪರೀಕ್ಷಾ ಕೊಠಡಿಗಳೆಂದರೆ ಆಟದ ಕ್ರೀಡಾಂಗಣಗಳಿದ್ದಂತೆ ಎಂಬ ವಾತಾವರಣ ಮೂಡಿಸಬೇಕು. ಅವರು ಯಾವುದೆ ಭಯ, ಖಿನ್ನತೆ, ಹಿಂಜರಿಕೆಗಳಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ, ಎಸೆಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು ಮಾತನಾಡಿದರು.

‘ಪರೀಕ್ಷಾ ಕೊಠಡಿಯೆಂದರೆ ಯುದ್ಧಭೂಮಿಯಲ್ಲ, ಅದು ಕ್ರೀಡಾಂಗಣವಿದ್ದಂತೆ’ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಮೂಡಿಸಿ, ಅವರು ಹೆಚ್ಚು ಅಂಕಗಳ ಮೂಲಕ ಉತ್ತೀರ್ಣರಾಗಲು ಉತ್ತೇಜನ ನೀಡಬೇಕು ಎಂದು ಹೇಳಿದ ಅವರು, ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದ ಸುಧಾರಣೆಗೆ ಕೈಗೊಂಡ ಕ್ರಮಗಳ ಕುರಿತು ಎಲ್ಲ ಸಿಇಒ-ಡಿಡಿಪಿಐಗಳಿಂದ ಮಾಹಿತಿ ಪಡೆದುಕೊಂಡರು.

ಪ್ರಶ್ನೆ ಪತ್ರಿಕೆ ರಚನೆ, ಪರೀಕ್ಷೆಗಳನ್ನು ಯಾವುದೇ ಭಯವಿಲ್ಲದೇ ಎದುರಿಸುವುದು, ಮಕ್ಕಳು ಪರೀಕ್ಷಾ ಸಮಯದಲ್ಲಿ ಆರೋಗ್ಯ ಕೆಡಿಸಿಕೊಳ್ಳದಂತೆ ಉತ್ತಮ ಆಹಾರ ಪದ್ಧತಿ ಪ್ರೇರೇಪಣೆಗೆ ಕ್ರಮ ಕೈಗೊಳ್ಳುವುದು, ಮಕ್ಕಳು ಮೊಬೈಲ್ ಫೋನ್ ಬಳಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಪರೀಕ್ಷೆಗಳು ಹತ್ತಿರವಾಗಿರುವುದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗಳಲ್ಲಿ ಸಂಜೆ ಪೋಷಕರು ಟಿವಿ ವೀಕ್ಷಣೆ ಮಾಡುವುದನ್ನು ತಡೆಯುವುದು, ವಿದ್ಯಾರ್ಥಿಗಳ ಪೋಷಕರಿಗೆ ಪ್ರತಿದಿನ ನಸುಕಿನಲ್ಲಿ ಫೋನ್‌ಗೆ ಮಿಸ್ಡ್‌ಕಾಲ್ ನೀಡಿ ಮಕ್ಕಳನ್ನು ಬೇಗನೆ ಎಬ್ಬಿಸಿ ಓದಿಕೊಳ್ಳಲು ಅನುವು ಮಾಡಿಕೊಡುವುದು ಸೇರಿದಂತೆ ಸಿಇಒಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಕುರಿತು ಸಚಿವರ ಗಮನಕ್ಕೆ ತಂದರು. ಫಲಿತಾಂಶ ಉತ್ತಮ ಪಡಿಸುವ ಭರದಲ್ಲಿ ಶಾಲೆಗಳ ಶಿಕ್ಷಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡುವುದರಿಂದ ಅದು ವ್ಯತಿರಿಕ್ತ ಪರಿಣಾಮ ಬೀರಿ ಪ್ರಾಮಾಣಿಕ ಪರೀಕ್ಷಾ ಕ್ರಮಕ್ಕೆ ಧಕ್ಕೆಯಾಗಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನಿಧಾನಗತಿಯ ಕಲಿಕೆ ಹೊಂದಿದ ಮತ್ತು ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ಮಕ್ಕಳ ಕಡೆ ವಿಶೇಷ ಗಮನ ಹರಿಸಿ ಅವರು ಉತ್ತಮಗೊಳ್ಳುವಂತೆ ಮಾಡಲು ಶಾಲಾ ಸಮಯಕ್ಕೆ ಮೊದಲು ಮತ್ತು ನಂತರ ವಿಶೇಷ ತರಗತಿಗಳನ್ನು ನಡೆಸಬೇಕೆಂದು ಅವರು ಸೂಚಿಸಿದರು.

ಅತಿಥಿ ಶಿಕ್ಷಕರ ನೇಮಕ ಪೂರ್ಣ: ಶಾಲಾ ಶಿಕ್ಷಕರು ನೇಮಕವಾಗುವ ತನಕ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಲಹೆ ನೀಡಿದ ಸುರೇಶ್ ಕುಮಾರ್, ಇನ್ನು ಮುಂದೆ ಜೂನ್ 1ರಿಂದಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು. ಎಸೆಸೆಲ್ಸಿ ಪರೀಕ್ಷಾ ಸುಧಾರಣೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ರಾಯಚೂರು, ಮಂಡ್ಯ ಜಿಲ್ಲೆ, ಧಾರವಾಡ ಶೈಕ್ಷಣಿಕ ವಲಯ ಮತ್ತು ಬೆಂಗಳೂರು ನಗರ ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವಾರು ಉತ್ತಮ ಕ್ರಮಗಳನ್ನು ಕೈಗೊಂಡಿದ್ದು ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಲ್ಲಿರುವ ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರೀಕ್ಷಾ ಸುಧಾರಣೆಗೆ ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳು, ಕೆಲ ನಿವೃತ್ತ ಹಾಗೂ ಖಾಸಗಿ ಸಂಸ್ಥೆಗಳ ಉಪನ್ಯಾಸಕರ ಸೇವೆ ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಲಿತಾಂಶ ಉತ್ತಮ ಪಡಿಸಲು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮಕ್ಕಳು ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲೇ ಬರೆಯುವ ಮೂಲಕ ಹೊಸ ಪರೀಕ್ಷಾ ಸ್ಥಳ ಎಂಬ ಭಾವನೆ ಮೂಡದಂತೆ ಕೈಗೊಂಡ ಕ್ರಮವನ್ನು ಸುರೇಶ್ ಕುಮಾರ್ ಶ್ಲಾಘಿಸಿದರು.

ಅಧಿಕಾರಿಗಳು ಶಾಲೆಗಳ ದತ್ತು ಪಡೆಯುವುದು, ಹಾಸ್ಟೆಲ್‌ಗಳಲ್ಲಿ ಕಾರ್ಯಪಡೆ ರಚಿಸುವುದು, ಪೋಷಕರು-ಶಿಕ್ಷಕರು-ಮಕ್ಕಳ ಸಭೆ ನಡೆಸುವುದು, ತಮ್ಮ ಮಕ್ಕಳು ಯಾವ ವಿಷಯದಲ್ಲಿ ಹಿನ್ನಡೆಯಲ್ಲಿದ್ದಾರೆಂದು ತಿಳಿಸಿ ಅವರನ್ನು ಹೆಚ್ಚು ಸಮಯ ಶಾಲೆಯಲ್ಲಿಟ್ಟುಕೊಳ್ಳುವ ಮೂಲಕ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News