ಶಬರಿಮಲೆ ತೀರ್ಪು ಅನುಷ್ಠಾನಕ್ಕೆ ಸೂಚನೆ ಇಲ್ಲ: ಸುಪ್ರೀಂ

Update: 2019-12-14 03:41 GMT

ಹೊಸದಿಲ್ಲಿ, ಡಿ.14: ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ಐವರು ನ್ಯಾಯಾಧೀಶರ ಸುಪ್ರೀಂಕೋರ್ಟ್ ಪೀಠ ನೀಡಿದ ತೀರ್ಪಿನ ಅನುಷ್ಠಾನಕ್ಕೆ ಕೇರಳ ಸರ್ಕಾರದ ಮೇಲೆ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಸಂಪ್ರದಾಯವನ್ನು ರದ್ದುಪಡಿಸಿ ಕಳೆದ ವರ್ಷ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಸಾವಿರ ವರ್ಷಗಳ ಸಂಪ್ರದಾಯ ತೀರಾ ಭಾವನಾತ್ಮಕ ವಿಚಾರವಾಗಿದ್ದು, ಏಳು ಮಂದಿ ನ್ಯಾಯಾಧೀಶರ ಪೀಠ ಈ ಸಂಬಂಧ ತೀರ್ಪು ನೀಡುವವರೆಗೂ ಹಿಂದಿನ ಆದೇಶದ ಜಾರಿಗೆ ಸೂಚನೆ ನೀಡುವುದಿಲ್ಲ ಎಂದು ಹೇಳಿದೆ.

2018ರ ಸೆಪ್ಟೆಂಬರ್ 28ರ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿ ಎ.ಎಸ್.ಫಾತಿಮಾ ಮತ್ತು ಬಿಂದೂ ಅಮ್ಮಣಿ ಸಲ್ಲಿಸಿರುವ ಅರ್ಜಿಯ ಬಗ್ಗೆ ವಾದ ಮಂಡಿಸಿದ ಹಿರಿಯ ವಕೀಲ ಕೊಲಿನ್ ಗೋನ್ಸಾಲ್ವಿಸ್ಸ್ ಮತ್ತು ಇಂದಿರಾ ಜೈಸಿಂಗ್, ಸುಪ್ರೀಂಕೋರ್ಟ್ ಆದೇಶ ಈ ನೆಲದ ಕಾನೂನಾಗಿದ್ದು, ಪ್ರಕರಣವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ಪರಾಮರ್ಶೆಗಾಗಿ ನೀಡಿದ್ದರೂ, ಹಿಂದಿನ ಆದೇಶ ಜಾರಿಗೆ ತಡೆ ನೀಡಿಲ್ಲ ಎಂದು ಹೇಳಿದರು. ಇದರ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ ವಿಫಲವಾದಲ್ಲಿ ಲಿಂಗ ಸಮಾನತೆ ಬಗೆಗೆ ಅದು ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.

"ಕಾನೂನು ನಿಮ್ಮ ಪರವಾಗಿದೆ. ನಿಜ; ಅದಕ್ಕೆ ತಡೆ ನೀಡಿಲ್ಲ. ಸರ್ಕಾರ ನಮ್ಮ ತೀರ್ಪಿಗೆ ಬದ್ಧವಾಗದಿದ್ದರೆ ಅವರನ್ನು ನಾವು ಜೈಲಿಗೆ ಕಳುಹಿಸುತ್ತೇವೆ. ಆದರೆ ಇದು ಭಾವನಾತ್ಮಕ ವಿಷಯ. ಸಾವಿರಾರು ವರ್ಷಗಳಿಂದ ಸಂಪ್ರದಾಯ ನಡೆದುಬಂದಿದೆ. ಈ ಕಾರಣದಿಂದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪನ್ನು ಏಳು ಮಂದಿ ನ್ಯಾಯಾಧೀಶರ ಪೀಠಕ್ಕೆ ನವೆಂಬರ್ 14ರಂದು ವರ್ಗಾಯಿಸಲಾಗಿದೆ. ಏಳು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡುವವರೆಗೂ ತಾಳ್ಮೆಯಿಂದ ಕಾಯಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿ.ಎಸ್.ಗವಾಯಿ ಹಾಗೂ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿತು.

"ಶೀಘ್ರವಾಗಿ ಏಳು ಮಂದಿ ನ್ಯಾಯಮೂರ್ತಿಗಳ ಪೀಠ ರಚಿಸಬೇಕಾಗಿದೆ. ಎರಡೂ ಅರ್ಜಿಗಳ ವಿಚಾರಣೆಯನ್ನು ಏಳು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡಿದ ಬಳಿಕ ನಡೆಸಲಾಗುತ್ತದೆ. ಏಳು ಮಂದಿ ನ್ಯಾಯಾಧೀಶರ ಪೀಠ ಕೂಡಾ ನಿಮ್ಮ ಪರವಾಗಿ ತೀರ್ಪು ನೀಡಿದಲ್ಲಿ, ನಾವು ಖಂಡಿತವಾಗಿಯೂ ಆದೇಶ ಮಾಡುತ್ತೇವೆ. ಆದರ ಇಂದು ಅಲ್ಲ. ಹಿಂಸಾಚಾರ ನಡೆಯುವುದನ್ನು ನಾವು ಬಯಸುವುದಿಲ್ಲ" ಎಂದು ಸಿಜೆಐ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News