"ಕ್ಷಮೆಯಾಚಿಸಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ"

Update: 2019-12-14 08:54 GMT

ಹೊಸದಿಲ್ಲಿ: ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಕ್ಷಮೆ ಕೇಳಬೇಕೆಂದು ಬಿಜೆಪಿ ಹೇಳುತ್ತದೆ. ಆದರೆ ಕ್ಷಮೆ ಯಾಚಿಸಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಭಾರತ್ ಬಚಾವೊ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ನರೇಂದ್ರ ಮೋದಿ ಮತ್ತು ಅವರ ಸಹಾಯಕ ಅಮಿತ್ ಶಾ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ದೇಶದ ಕ್ಷಮೆ ಯಾಚಿಸಬೇಕು. ನರೇಂದ್ರ ಮೋದಿ ಒಬ್ಬರೇ ಇಡೀ ದೇಶದ ಆರ್ಥಿಕತೆಯನ್ನೇ ನಾಶಗೈದಿದ್ದಾರೆ. ನಮ್ಮ ಆರ್ಥಿಕ ವ್ಯವಸ್ಥೆಯನ್ನು ನೋಟು ನಿಷೇಧವು ನಾಶಗೊಳಿಸಿದೆ. ನಮ್ಮ ಆರ್ಥಿಕತೆಯನ್ನು ನಾಶಗೊಳಿಸಿದ್ದು ಪ್ರಧಾನಿ ಮೋದಿಯೇ ಹೊರತು ನಮ್ಮ ಶತ್ರುಗಳಲ್ಲ. ಆದರೂ ಅವರು ತಮ್ಮನ್ನು ದೇಶಭಕ್ತ ಎನ್ನುತ್ತಿದ್ದಾರೆ" ಎಂದು ರಾಹುಲ್ ಆರೋಪಿಸಿದರು.

ಇಂದು ಜಿಡಿಪಿ 4 ಶೇ.ಕ್ಕೆ ತಲುಪಿದೆ. ಅದೂ ಕೂಡ ಜಿಡಿಪಿ ಅಳೆಯುವ ವಿಧಾನವನ್ನು ಬಿಜೆಪಿ ಬದಲಿಸಿದ ಬಳಿಕ. ಒಂದು ವೇಳೆ ಹಿಂದಿನ ರೀತಿಯಲ್ಲಿ ಜಿಡಿಪಿಯನ್ನು ಲೆಕ್ಕ ಹಾಕುವುದಾದರೆ ಜಿಡಿಪಿ 2.5 ಶೇ.ದಷ್ಟಿರಬಹುದು ಎಂದವರು ಹೇಳಿದರು.

ನಮ್ಮ ಪ್ರಧಾನಿಯು ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಅವರು ನಮ್ಮ ಆರ್ಥಿಕತೆಯನ್ನು ನಾಶಗೊಳಿಸುತ್ತಾರೆ ಮತ್ತು ಯುವಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ. ಇಂದು ಮಾಧ್ಯಮವೂ ಅದರ ಜವಾಬ್ದಾರಿಯನ್ನು ಮರೆತಿದ್ದು, ಮಾಧ್ಯಮವೂ ಕೂಡ ಈ ಸ್ಥಿತಿಗೆ ಜವಾಬ್ದಾರ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News