ಇಂಗಾಲ ಅನಿಲ ಉತ್ಪಾದನೆ ಕಡಿತ: ಹೆಚ್ಚು ಮಹತ್ವಾಕಾಂಕ್ಷಿ ಕ್ರಮಗಳಿಗೆ ದೇಶಗಳಿಗೆ ಕರೆ

Update: 2019-12-15 17:48 GMT

ಮ್ಯಾಡ್ರಿಡ್ (ಸ್ಪೇನ್), ಡಿ. 15: 2015ರ ಪ್ಯಾರಿಸ್ ಪರಿಸರ ಒಪ್ಪಂದದ ಗುರಿಗಳನ್ನು ಈಡೇರಿಸಲು ಸಾಧ್ಯವಾಗುವಂತೆ, ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಹೊರಸೂಸುವಿಕೆಯ ಪ್ರಮಾಣವನ್ನು ಕಡಿತಗೊಳಿಸುವಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೇಶಗಳನ್ನು ಒತ್ತಾಯಿಸುವ ಆಂಶಿಕ ಒಪ್ಪಂದದೊಂದಿಗೆ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ರವಿವಾರ ಕೊನೆಗೊಂಡಿದೆ.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಸಿಒಪಿ25 ಪರಿಸರ ಸಮ್ಮೇಳನದಲ್ಲಿ ಮಾತುಕತೆ ಕೊನೆಗೊಳ್ಳಲು ವಿಧಿಸಲಾಗಿದ್ದ ಗಡುವು ಮುಗಿದು 40 ಗಂಟೆಗಳಿಗೂ ಹೆಚ್ಚಿನ ಅವಧಿ ಕಳೆದರೂ, ರವಿವಾರ ಮಧ್ಯಾಹ್ನದ ಹೊತ್ತಿಗೂ ಒಪ್ಪಂದವೊಂದಕ್ಕೆ ಬರಲು ದೇಶಗಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಮುಂದಿನ ವರ್ಷದ ಸಮ್ಮೇಳನದಲ್ಲಿ ವಿವಾದವನ್ನು ಬಗೆಹರಿಸಲು ತೀರ್ಮಾನಿಸಲಾಯಿತು.

ಪ್ಯಾರಿಸ್ ಒಪ್ಪಂದದ ಗುರಿಗಳನ್ನು ತಲುಪುವುದಕ್ಕಾಗಿ ಸುಧಾರಿತ ಯೋಜನೆಗಳೊಂದಿಗೆ ಯಾವುದೇ ದೇಶವು ಈ ವರ್ಷದ ಪರಿಸರ ಸಮ್ಮೇಳನಕ್ಕೆ ಬಂದಿರಲಿಲ್ಲ. ಆದರೆ 2050ರ ವೇಳೆಗೆ ಶೂನ್ಯ ಮಾಲಿನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಾವಧಿ ಗುರಿಗೆ ಐರೋಪ್ಯ ಒಕ್ಕೂಟವು ಅಂತಿಮವಾಗಿ ಒಪ್ಪಿಗೆ ನೀಡಿದೆ.

ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಕಾಲಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗುವುದನ್ನು ತಡೆಯಬೇಕು ಎಂದು 2015ರ ಪ್ಯಾರಿಸ ಪರಿಸರ ಒಪ್ಪಂದವು ಹೇಳುತ್ತದೆ.

ಭವಿಷ್ಯದ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವನ್ನು ಕಡಿತಗೊಳಿಸುವ ಕಾರ್ಯಸೂಚಿಯೂ ಚರ್ಚೆಗೆ ಬರದಿರುವ ಭೀತಿಯೂ ಪರಿಸರವಾದಿಗಳನ್ನು ಒಂದು ಹಂತದಲ್ಲಿ ಕಾಡಿತು. ಆದರೆ, ಐರೋಪ್ಯ ಒಕ್ಕೂಟ ಮತ್ತು ಹಲವಾರು ಸಣ್ಣ ಅಭಿವೃದ್ಧಿಶೀಲ ದೇಶಗಳ ಒಕ್ಕೂಟವಾದ ‘ಅತಿ ಮಹತ್ವಾಕಾಂಕ್ಷೆಯ ಮೈತ್ರಿಕೂಟ’ವು, ಇಂಗಾಲ ಡೈ ಆಕ್ಸೈಡನ್ನು ಕಡಿತಗೊಳಿಸುವ ಪ್ರಬಲ ರಾಷ್ಟ್ರೀಯ ಯೋಜನೆಗಳನ್ನು ರೂಪಿಸುವಂತೆ ಎಲ್ಲ ಸರಕಾರಗಳಿಗೆ ಸೂಚಿಸುವ ನಿರ್ಣಯವೊಂದನ್ನು ಅಂಗೀಕರಿಸುವಂತೆ ಒತ್ತಾಯಿಸಿತು.

ಮೈತ್ರಿಕೂಟವು ಇದರಲ್ಲಿ ಭಾಗಶಃ ಯಶಸ್ವಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News