​ಸಿಎಎ ವಿರುದ್ಧದ ಜಾಹೀರಾತು ವಾಪಾಸು ಪಡೆಯಲು ಬಂಗಾಳ ರಾಜ್ಯಪಾಲರ ಸೂಚನೆ

Update: 2019-12-16 03:59 GMT

ಕೊಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಜಾಹೀರಾತುಗಳನ್ನು ಟಿವಿ ಚಾನಲ್‌ಗಳಲ್ಲಿ ನೀಡುವ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಆಪಾದಿಸಿದ್ದಾರೆ. ತಕ್ಷಣ ಈ ಜಾಹೀರಾತು ವಾಪಾಸು ಪಡೆಯುವಂತೆ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ಮಮತಾ ಸರ್ಕಾರ ಸಿಎಎ ವಿರೋಧಿ ಪ್ರತಿಭಟನೆಯನ್ನು ಪೊಲೀಸರ ನೆರವಿನೊಂದಿಗೆ ಪರಿಣಾಮಕಾರಿಯಾಗಿ ಹತ್ತಿಕ್ಕುವ ಬದಲು ಟಿವಿ ಚಾನಲ್‌ಗಳಲ್ಲಿ ಸಿಎಎ ವಿರೋಧಿ ಜಾಹೀರಾತು ನೀಡುತ್ತಿದೆ. ಇದು ಅಸಂವಿಧಾನಿಕ. ಇದನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಅವರು ಆದೇಶಿಸಿದ್ದಾರೆ.

"ಸರ್ಕಾರ ಈ ಜಾಹೀರಾತು ವಿಚಾರದಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಬೇಕಿದೆ. ಕನಿಷ್ಠ ಜಾಹೀರಾತುಗಳನ್ನು ವಾಪಾಸು ಪಡೆಯಬೇಕಿದೆ. ಇವು ಅಸಂವಿಧಾನಿಕ. ಅನುಮತಿ ನೀಡಲು ಸಾಧ್ಯವಿಲ್ಲದ್ದು. ಇದು ಸಾರ್ವಜನಿಕ ನಿಧಿಯ ದುರ್ಬಳಕೆ" ಎಂದು ಶನಿವಾರದಿಂದ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತುಗಳ ಬಗ್ಗೆ ಉಲ್ಲೇಖಿಸಿ ಹೇಳಿದರು.

ಈ ಜಾಹೀರಾತಿನಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರು, ಹಿಂಸಾಕೃತ್ಯಗಳನ್ನು ಕೈಬಿಡುವಂತೆ ಮನವಿ ಮಾಡಿದ್ದು, ಸಿಎಎ ಹಾಗೂ ಎನ್‌ಆರ್‌ಸಿಯನ್ನು ಬಂಗಾಳದಲ್ಲಿ ತಮ್ಮ ಸರ್ಕಾರ ಅನುಷ್ಠಾನಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಂಸತ್ತಿನಲ್ಲಿ ಅನುಮೋದನೆ ಪಡೆದ ಮಸೂದೆಯನ್ನು ವಿರೋಧಿಸುವುದು ಅಸಂವಿಧಾನಿಕ ಹಾಗೂ ಇದು ಅರಾಜಕತೆಗೆ ಎಡೆ ಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News