ಮೊದಲ ಏಕದಿನದಲ್ಲಿ ನಿಧಾನಗತಿಯ ಬೌಲಿಂಗ್; ವಿಂಡೀಸ್ ಆಟಗಾರರಿಗೆ ದಂಡ

Update: 2019-12-17 13:27 GMT

ದುಬೈ, ಡಿ.16: ಭಾರತ ವಿರುದ್ಧ ಚೆನ್ನೈನಲ್ಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ವೆಸ್ಟ್‌ಇಂಡೀಸ್‌ಗೆ ದಂಡ ವಿಧಿಸಲಾಗಿದೆ. ಕಿರೊನ್ ಪೊಲಾರ್ಡ್ ನೇತೃತ್ವದ ವಿಂಡೀಸ್ ನಿಗದಿತ ಸಮಯದ ವೇಳೆಗೆ ನಾಲ್ಕು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಎಲೈಟ್ ಪ್ಯಾನಲ್‌ನ ಮ್ಯಾಚ್ ರೆಫರಿ ಡೇವಿಡ್ ಬೂನ್ ಪಂದ್ಯಶುಲ್ಕದಲ್ಲಿ ಶೇ.80ರಷ್ಟು ದಂಡ ವಿಧಿಸಿದ್ದಾರೆ.

ಕನಿಷ್ಠ ಓವರ್ ರೇಟ್‌ಗೆ ಸಂಬಂಧಿಸಿ ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆ ವಿಧಿ 2.22ರ ಪ್ರಕಾರ ಪ್ರತಿ ಓವರ್‌ಗೆ ಪಂದ್ಯ ಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಲಾಗುತ್ತದೆ. ಹೀಗಾಗಿ 4 ಓವರ್ ಕಡಿಮೆ ಎಸೆದಿರುವ ವಿಂಡೀಸ್ ಆಟಗಾರರಿಗೆ ಪಂದ್ಯಶುಲ್ಕದಲ್ಲಿ ಶೇ.80ರಷ್ಟು ದಂಡ ವಿಧಿಸಲಾಗಿದೆ. ಪಂದ್ಯ ಮುಗಿದ ಬಳಿಕ ನಾಯಕ ಪೊಲಾರ್ಡ್ ತನ್ನ ತಪ್ಪನ್ನು ಒಪ್ಪಿಕೊಂಡ ಕಾರಣ ಅಧಿಕೃತ ವಿಚಾರಣೆ ನಡೆಸಿಲ್ಲ.

ಮೈದಾನದೊಳಗಿನ ಅಂಪೈರ್‌ಗಳಾದ ನಿತಿನ್ ಮೆಮನ್ ಹಾಗೂ ಶಾವುನ್ ಜಾರ್ಜ್, ಮೂರನೇ ಅಂಪೈರ್ ರೊಡ್ನಿ ಟಕರ್ ಹಾಗೂ ನಾಲ್ಕನೇ ಅಂಪೈರ್ ಅನಿಲ್ ಚೌಧರಿ ಐಸಿಸಿಗೆ ವಿಂಡೀಸ್ ಆಟಗಾರರ ವಿರುದ್ಧ ವರದಿ ಸಲ್ಲಿಸಿದ್ದರು. ಮೊದಲ ಪಂದ್ಯವನ್ನು ವಿಂಡೀಸ್ 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಶಿಮ್ರಾನ್ ಹೆಟ್ಮೆಯರ್(139) ಹಾಗೂ ಶೈ ಹೋಪ್(ಔಟಾಗದೆ 102)ಶತಕ ಸಿಡಿಸಿದ್ದರು. ಇದೀಗ ಉಭಯ ತಂಡಗಳು ಡಿ.18ರಂದು ದ್ವಿತೀಯ ಏಕದಿನ ಪಂದ್ಯವನ್ನು ಆಡಲು ವಿಶಾಖಪಟ್ಟಣಕ್ಕೆ ತೆರಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News