ಆಹಾರ ಪೋಲಾಗುವುದನ್ನು ತಡೆಯಲಿದೆ ಈ ಸೌದಿ ಉದ್ಯಮಿಯ 'ವಿಶೇಷ ತಟ್ಟೆ'!

Update: 2019-12-17 13:18 GMT
Photo: WION

ರಿಯಾದ್: ಸಾಮಾನ್ಯವಾಗಿ ಮನೆಯಲ್ಲಾಗಲೀ, ರೆಸ್ಟೋರೆಂಟ್ ಗಳಲ್ಲಾಗಲೀ ಅನ್ನ ಪೋಲಾಗುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಪಂಚದಲ್ಲಿ ಎಷ್ಟೋ ಜನರು ಅನ್ನವಿಲ್ಲದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಆಹಾರಗಳು ಹೆಚ್ಚಾಗಿ ಕಸದ ಬುಟ್ಟಿ ಸೇರುತ್ತಿದೆ. ಇದೀಗ ಈ ರೀತಿ ಊಟ ಪೋಲಾಗುವುದನ್ನು ತಡೆಯಲು ಸೌದಿ ಅರೇಬಿಯಾದ ಉದ್ಯಮಿಯೊಬ್ಬರು 'ವಿಶಿಷ್ಟ ತಟ್ಟೆ'ಯೊಂದನ್ನು ಕಂಡುಹಿಡಿದಿದ್ದಾರೆ.

ಸೌದಿ ಉದ್ಯಮಿ ಮಶಲ್ ಅಲ್ ಖರಾಷಿಯವರು ಕಂಡುಹಿಡಿದಿರುವ ಈ ತಟ್ಟೆಯಲ್ಲಿ ಬಡಿಸಿಡಲಾದ ಅನ್ನಕ್ಕಿಂತ ಹೆಚ್ಚಿನ ಅನ್ನ ಇದ್ದ ಹಾಗೆ ಕಾಣುತ್ತದೆ. ಈ ತಟ್ಟೆಯ ಮಧ್ಯಭಾಗ ಉಬ್ಬಿರುವಂತೆ ಅದನ್ನು ವಿನ್ಯಾಸಗೊಳಿಸಲಾಗಿರುವುದರಿಂದ ಅದರಲ್ಲಿ ಕಡಿಮೆ ಅನ್ನ ಬಡಿಸಿಟ್ಟರೂ ಹೆಚ್ಚು ಅನ್ನ ಹಾಕಿರುವಂತೆ ಕಂಡು ಬರುತ್ತದೆ. ಈ ರೀತಿ ಅನ್ನ ಹೆಚ್ಚು ಪೋಲಾಗುವುದನ್ನು ತಡೆಗಟ್ಟಬಹುದು ಎಂದು  ಖರಾಷಿ ಹೇಳುತ್ತಾರೆ.

ಸರಾಸರಿ ಒಬ್ಬ ಸೌದಿ ನಾಗರಿಕ ವಾರ್ಷಿಕ 250 ಕೆಜಿ ಆಹಾರ ಪೋಲು ಮಾಡುತ್ತಾನೆ. ಜಗತ್ತಿನಲ್ಲಿ ಈ ಪ್ರಮಾಣ  ಸರಾಸರಿ 115 ಕೆಜಿಯಾಗಿದೆ ಎಂದು ಸೌದಿ ಪರಿಸರ ಜಲ ಮತ್ತು ಕೃಷಿ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ. ತೈಲ ಬೆಲೆ ಇಳಿಕೆಯಿಂದುಂಟಾದ ನಷ್ಟವನ್ನು ಭರಿಸಲು ಹೆಣಗಾಡುತ್ತಿರುವ ಸೌದಿ ಅರೇಬಿಯಾ ಈ ರೀತಿ ಆಹಾರ ಪೋಲಾಗುವುದರಿಂದ  ವಾರ್ಷಿಕ 13 ಶತಕೋಟಿ ಡಾಲರ್ ನಷ್ಟ ಅನುಭವಿಸುತ್ತದೆ ಎನ್ನಲಾಗಿದೆ.

ಹಲವು ಸೌದಿ ರೆಸ್ಟೋರೆಂಟುಗಳು ಇತ್ತೀಚಿಗಿನ ವರ್ಷಗಳಲ್ಲಿ ಖರಾಷಿ ವಿನ್ಯಾಸಗೊಳಿಸಿದ ಪ್ಲೇಟನ್ನೇ ಬಳಸುತ್ತಿದ್ದು, ಈ ಮೂಲಕ 3,000ಕ್ಕೂ ಅಧಿಕ ಟನ್ ಅಕ್ಕಿ ಉಳಿಸಿವೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News