ಪಾಕ್: ಅಳಿವಿನಂಚಿನ ಹಕ್ಕಿಗಳ ಬೇಟೆಗೆ ಕತರ್ ಅಮೀರ್‌ಗೆ ಅನುಮತಿ

Update: 2019-12-17 16:48 GMT

ಇಸ್ಲಾಮಾಬಾದ್, ಡಿ. 17: ಕತರ್ ದೇಶದ ಅಮೀರ್ ಮತ್ತು ರಾಜ ಕುಟುಂಬದ ಇತರ 9 ಸದಸ್ಯರಿಗೆ ಅಳಿವಿನಂಚಿನಲ್ಲಿರುವ ‘ಹೌಬಾರ ಬಸ್ಟರ್ಡ್’ ಹಕ್ಕಿಗಳನ್ನು ಬೇಟೆಯಾಡಲು ಪಾಕಿಸ್ತಾನವು ವಿಶೇಷ ಪರವಾನಿಗೆಗಳನ್ನು ನೀಡಿದೆ ಎಂದು ಮಂಗಳವಾರ ಮಾಧ್ಯಮ ವರದಿಯೊಂದು ಹೇಳಿದೆ. ಪಾಕಿಸ್ತಾನ ಸರಕಾರದ ಈ ಕ್ರಮಕ್ಕೆ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಿಂಧ್, ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತಗಳಲ್ಲಿ ಹರಡಿಕೊಂಡಿರುವ ಪ್ರದೇಶಗಳಲ್ಲಿ ಈ ಹಕ್ಕಿಗಳನ್ನು ಬೇಟೆಯಾಡಲು ಅವಕಾಶ ನೀಡಲಾಗಿದೆ. 2019 ನವೆಂಬರ್ 1ರಿಂದ 2020 ಜನವರಿ 31ರ ನಡುವಿನ ಮೂರು ತಿಂಗಳ ಬೇಟೆ ಋತುವಿನ ಅವಧಿಯಲ್ಲಿ, ಕತರ್ ರಾಜ ಕುಟುಂಬ 10 ದಿನಗಳ ಸಫಾರಿ ಅವಧಿಯಲ್ಲಿ 100 ಹೌಬಾರ ಬಸ್ಟರ್ಡ್‌ಗಳನ್ನು ಬೇಟೆಯಾಡಬಹುದಾಗಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ವಿದೇಶ ಸಚಿವಾಲಯದ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥ ಮುಹಮ್ಮದ್ ಅದೀಲ್ ಫರ್ವೇಝ್, ಕತರ್ ಅಮೀರ್ ತಮೀಮ್ ಬಿನ್ ಹಮದ್ ಬಿನ್ ಖಲೀಫ ಅಲ್ ಥಾನಿ, ಅವರ ಚಿಕ್ಕಪ್ಪ, ಸಹೋದರ ಮತ್ತು ಅವರ ಕುಟುಂಬದ ಇತರ 7 ಮಂದಿಗೆ ಬೇಟೆ ಪರವಾನಿಗೆಯನ್ನು ನೀಡಿದ್ದಾರೆ.

ಕೊಲ್ಲಿ ದೇಶಗಳ ರಾಜ ಕುಟುಂಬಗಳ ಸದಸ್ಯರಿಗೆ ಪ್ರತಿ ವರ್ಷ ಪರವಾನಿಗೆಗಳನ್ನು ನೀಡಲಾಗುತ್ತಿದೆ. ಈ ಕ್ರಮಕ್ಕೆ ಪಾಕಿಸ್ತಾನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಕ್ಕಿಗಳನ್ನು ಬೇಟೆಯಾಡಲು ಪಾಕಿಸ್ತಾನೀಯರಿಗೆ ಅನುಮತಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News