ಎರಡನೇ ಏಕದಿನ ಪಂದ್ಯದಲ್ಲಿ ರಾಹುಲ್-ರೋಹಿತ್ ಶತಕ: ಭಾರತ 387/5

Update: 2019-12-18 11:58 GMT

ವಿಶಾಖಪಟ್ಟಣ, ಡಿ.18: ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಲೋಕೇಶ್ ರಾಹುಲ್ ಶತಕದ ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 387 ರನ್ ಗಳಿಸಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 37 ಓವರ್‌ಗಳಲ್ಲಿ 227 ರನ್‌ಗಳ ಜೊತೆಯಾಟ ನೀಡಿದರು.

ರೋಹಿತ್ ಶರ್ಮಾ 159 ರನ್ (138ಎ, 17ಬೌ,5ಸಿ) ಮತ್ತು ರಾಹುಲ್ 102ರನ್(104ಎ, 8ಬೌ,3ಸಿ) ಗಳಿಸಿ ಬೆಟ್ಟದಂತಹ ಸವಾಲನ್ನು ಸೇರಿಸಲು ಭಾರತಕ್ಕೆ ನೆರವಾದರು.

ರೋಹಿತ್ ಶರ್ಮಾ 220ನೇ ಏಕದಿನ ಪಂದ್ಯದಲ್ಲಿ 107 ಎಸೆತಗಳಲ್ಲಿ 11ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 28ನೇ ಶತಕ ದಾಖಲಿಸಿದರು. 25ನೇ ಪಂದ್ಯವನ್ನಾಡುತ್ತಿರುವ ರಾಹುಲ್ 102 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 3ನೇ ಶತಕ ಪೂರ್ಣಗೊಳಿಸಿದರು.

ನಾಯಕ ವಿರಾಟ್ ಕೊಹ್ಲಿ(0) ತಾನು ಎದುರಿಸಿದ ಮೊದಲ ಎಸೆತದಲ್ಲೇ ಪೊಲಾರ್ಡ್‌ಗೆ ವಿಕೆಟ್ ಒಪ್ಪಿಸಿ ವಾಪಸಾದರು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ 39ರನ್, ಶ್ರೇಯಸ್ ಅಯ್ಯರ್ 53 ರನ್(32ಎ, 3ಬೌ,4ಸಿ) ಮತ್ತು ಕೇದಾರ್ ಜಾಧವ್ ಔಟಾಗದೆ 16 ರನ್ ಗಳಿಸಿದರು. ವಿಂಡೀಸ್‌ನ ಕಾಟ್ರೆಲ್ 83ಕ್ಕೆ 2, ಪಾಲ್, ಜೋಸೆಫ್ ಮತ್ತು ಪೊಲಾರ್ಡ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News