ಈಗ ಮೌನವಹಿಸಿದರೆ ನಮ್ಮ ಅಸ್ತಿತ್ವವೇ ಇಲ್ಲದಾಗುತ್ತದೆ: ಎನ್‌ಆರ್‌ಸಿ-ಸಿಎಎ ವಿರುದ್ಧ ಸಿ.ಎಂ.ಇಬ್ರಾಹಿಂ

Update: 2019-12-19 09:41 GMT

ಬೆಂಗಳೂರು, ಡಿ.18: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ದೇಶದಲ್ಲಿರುವ 32 ಕೋಟಿ ಹಾಗೂ ರಾಜ್ಯದಲ್ಲಿರುವ 1.30 ಕೋಟಿ ಮುಸ್ಲಿಮರು ಸಾಮೂಹಿಕ ಬಹಿಷ್ಕಾರ ಹಾಕಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕರೆ ನೀಡಿದ್ದಾರೆ.

ಬುಧವಾರ ನಗರದ ಬೆನ್ಸನ್‌ಟೌನ್‌ನಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಆರ್‌ಸಿ, ಸಿಎಎಗೆ ಸಂಬಂಧಿಸಿದ ಯಾವ ಅರ್ಜಿಯನ್ನು ಭರ್ತಿ ಮಾಡುವುದಿಲ್ಲ, ಯಾವ ಅಧಿಕಾರಿಯ ಮುಂದೆಯೂ ಸ್ಪಷ್ಟೀಕರಣ ನೀಡಲ್ಲವೆಂದು ಎಲ್ಲರೂ ಒಗ್ಗಟ್ಟಿನಿಂದ ಒಂದು ತೀರ್ಮಾನ ಕೈಗೊಂಡರೆ, ಕೇಂದ್ರ ಸರಕಾರ ಮಂಡಿಯೂರುತ್ತದೆ ಎಂದರು.

ಕೇಂದ್ರ ಸರಕಾರ ತನ್ನ ಉದ್ದೇಶ ಈಡೇರಿಸಲು ಐಟಿ ಇಲಾಖೆ ಸೇರಿದಂತೆ ಇನ್ನಿತರ ಮೂಲಗಳಿಂದ ಸಮುದಾಯದಲ್ಲಿ ವಿಭಜನೆ ಮಾಡಲು ಪ್ರಯತ್ನಿಸಬಹುದು. ಆದರೆ, ಇದ್ಯಾವುದಕ್ಕೂ ನಾವು ಸೊಪ್ಪು ಹಾಕಬಾರದು. ಈಗ ನಾವು ಮೌನವಹಿಸಿದರೆ, ನಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಇಬ್ರಾಹಿಂ ಎಚ್ಚರಿಕೆ ನೀಡಿದರು.

ವಿಶ್ವದ ಬೇರೆ ದೇಶಗಳು ನಮಗೆ ಈ ವಿಚಾರದಲ್ಲಿ ಬೆಂಬಲ ಕೊಡುತ್ತವೆ ಎಂಬ ನಂಬಿಕೆಯಿಲ್ಲ. ಆ ರೀತಿಯ ಆಲೋಚನೆಯನ್ನು ನಾವು ಇಟ್ಟುಕೊಳ್ಳಬಾರದು. ಕಳೆದ 72 ವರ್ಷಗಳಿಂದ ನಮ್ಮ ಮೇಲೆ ಆಗುತ್ತಿರುವುದನ್ನು ನಾವೇ ಅನುಭವಿಸಿದ್ದೇವೆ, ನಾವೇ ಅದನ್ನು ಎದುರಿಸಿದ್ದೇವೆ ಎಂದು ಅವರು ಹೇಳಿದರು.

ರಾಜಕೀಯ ಪಾಲುದಾರಿಕೆಯನ್ನು ನಮ್ಮ ಸಮುದಾಯ ಹೆಚ್ಚಿಸಬೇಕು. ಮತದಾರರ ಗುರುತಿನ ಚೀಟಿಯನ್ನು ಮಾಡಿಸಿ ಕನಿಷ್ಠ ಶೇ.90ರಷ್ಟು ಮಂದಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಆದರೆ, ಈವರೆಗೆ ಇವಿಎಂಗಳ ಮೇಲೆ ಜನರಿಗೆ ಮೂಡಬೇಕಾದ ವಿಶ್ವಾಸ ಇನ್ನು ಬಂದಿಲ್ಲ. ಎನ್‌ಆರ್‌ಸಿ, ಸಿಎಎ ವಿರುದ್ಧ ಯಾವ ರೀತಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಬೀದಿಗೆ ಇಳಿದಿವೆಯೋ, ಅದೇ ರೀತಿ ಇವಿಎಂ ವಿರುದ್ಧ ಧ್ವನಿ ಎತ್ತಿದ್ದರೆ ಬಹುಷಃ ನಮಗೆ ಜಯ ಸಿಗುತ್ತಿತ್ತು ಎಂದು ಅವರು ತಿಳಿಸಿದರು.

ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರು ತೋರಿಸಿರುವ ವರ್ತನೆ ನೋಡಿ ದುಃಖವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪೊಲೀಸರು ಮಾಡುತ್ತಿರುವ ಕೆಲಸಗಳನ್ನು ನೋಡಿ ಬೇಸರವಾಗಿದೆ ಎಂದು ಇಬ್ರಾಹಿಂ ಹೇಳಿದರು.

ದಿಲ್ಲಿಯ ಉಪ ಮುಖ್ಯಮಂತ್ರಿ ಪೊಲೀಸರ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿ ಓಡಿಸಿರುವುದನ್ನು ಖಂಡಿಸಿ, ದೇಶದ ಎಲ್ಲ ವಿವಿಗಳಲ್ಲಿ ವಿದ್ಯಾರ್ಥಿಗಳು ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ತಿಳಿಸಿದರು.

ಡಿ.28ರಂದು ನಗರದ ಅಂಬೇಡ್ಕರ್ ಭವನದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ವಕೀಲರು, ಸಿಖ್, ಕ್ರೈಸ್ತ, ದಲಿತ ಸಮುದಾಯದ ಮುಖಂಡರು, ಪ್ರತಿನಿಧಿಗಳ ಸಭೆ ನಡೆಸಿ, ಎನ್‌ಆರ್‌ಸಿ, ಸಿಎಎ ಕುರಿತು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಇಬ್ರಾಹಿಂ ಹೇಳಿದರು.

ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಜನರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಯಾರ ಬಗ್ಗೆಯೂ ಭಯಪಡುವ ಅಗತ್ಯವೇ ಇಲ್ಲ ಎಂದು ಅವರು ತಿಳಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ನಾಶವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಜಿಡಿಪಿ ಕುಸಿಯುತ್ತಿದೆ. ಬಾಂಗ್ಲಾದೇಶದ ಜಿಡಿಪಿ ಶೇ.8.5 ಇದ್ದರೆ, ಭಾರತದ್ದು ಶೇ.4ಕ್ಕೆ ಇಳಿದಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದ ಜಿಡಿಪಿ ನಮಗಿಂತ ಹೆಚ್ಚಿದೆ. ಜಿಡಿಪಿ ಕೇಳಿದರೆ ಎನ್‌ಆರ್‌ಸಿ ತೋರಿಸುತ್ತಿದ್ದಾರೆ ಎಂದು ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News