ಮಿಥುನ್ ಮಾರಕ ದಾಳಿ, ಉತ್ತರಪ್ರದೇಶ 281 ರನ್‌ಗೆ ಆಲೌಟ್

Update: 2019-12-18 18:37 GMT

ಹುಬ್ಬಳ್ಳಿ, ಡಿ.18: ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಮಾರಕ ದಾಳಿಗೆ(6-60)ತತ್ತರಿಸಿದ ಉತ್ತರಪ್ರದೇಶ ತಂಡ ರಣಜಿ ಟ್ರೋಫಿ ‘ಬಿ’ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 281 ರನ್‌ಗಳಿಗೆ ಆಲೌಟಾಗಿದೆ.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 59 ಓವರ್‌ಗಳಲ್ಲಿ 168 ರನ್ ಗಳಿಸಿ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಅರ್ಧಶತಕ(74, 108 ಎಸೆತ, 10 ಬೌಂಡರಿ)ಕೊಡುಗೆ ನೀಡಿ ತಂಡವನ್ನು ಆಧರಿಸಿದರು. ನಿಶ್ಚಲ್(36, 90 ಎಸೆತ, 4 ಬೌಂಡರಿ)ಹಾಗೂ ಪಡಿಕ್ಕಲ್ ಮೊದಲ ವಿಕೆಟ್‌ಗೆ 91 ರನ್ ಸೇರಿಸಿ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ಆರ್.ಸಮರ್ಥ್(11), ನಾಯಕ ಕರುಣ್ ನಾಯರ್(13)ಬೇಗನೆ ವಿಕೆಟ್ ಕೈಚೆಲ್ಲಿದ ಕಾರಣ ಕರ್ನಾಟಕ ಹಿನ್ನಡೆ ಅನುಭವಿಸಿದೆ. ದಿನದಾಟದಂತ್ಯಕ್ಕೆ ಎಎಂ ರೆಡ್ಡಿ(23) ಹಾಗೂ ಎಸ್.ಗೋಪಾಲ್(8)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯ ತಂಡ ಮೊದಲ ಇನಿಂಗ್ಸ್ ನಲ್ಲಿ 113 ರನ್ ಹಿನ್ನಡೆಯಲ್ಲಿದೆ.

ಇದಕ್ಕೂ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 232 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಉತ್ತರಪ್ರದೇಶ ನಿನ್ನೆಯ ಮೊತ್ತಕ್ಕೆ ಕೇವಲ 49 ರನ್ ಸೇರಿಸುವಷ್ಟರಲ್ಲಿ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಿಥುನ್ ಆರು ವಿಕೆಟ್ ಗೊಂಚಲು ಪಡೆದರೆ, ರೋನಿತ್ ಮೋರೆ(2-41) ಹಾಗೂ ಎಸ್.ಗೋಪಾಲ್(2-51) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಔಟಾಗದೆ 56 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮುಹಮ್ಮದ್ ಸೈಫ್(80,181 ಎಸೆತ, 11 ಬೌಂಡರಿ)ಮಿಥುನ್‌ಗೆ ಔಟಾಗುವ ಮೊದಲು 80 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News