ಮಂಗಳೂರು ಗೋಲಿಬಾರ್ ಘಟನೆಯ ಉನ್ನತ ಮಟ್ಟದ ತನಿಖೆಯಾಗಬೇಕು:ಸಿದ್ದರಾಮಯ್ಯ

Update: 2019-12-20 11:15 GMT

ಬೆಂಗಳೂರು, ಡಿ.20: ಮಂಗಳೂರಿನಲ್ಲಿ ಗುರುವಾರ ನಡೆದ ಗೋಲಿಬಾರ್ ಘಟನೆ ಅಮಾನವೀಯ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ವಿನಾ ಕಾರಣ ಗುಂಡು ಹಾರಿಸಿದ್ದಾರೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಯಿಂದ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರತಿಭಟನೆ ಹತ್ತಿಕ್ಕುವ ಅಧಿಕಾರವನ್ನು ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಇವತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜನರ ಆಕ್ರೋಶ ವ್ಯಕ್ತವಾಗಿದೆ.ಎಲ್ಲ ಧರ್ಮ-ಜಾತಿಯವರೂ ಪ್ರತಿಭಟಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಒಂದು ಕಡೆ ಯಡಿಯೂರಪ್ಪ ಗುಂಡು ಹಾರಿಸಬೇಡಿ ಅಂತಾರೆ. ಅವರ ಆದೇಶ ಇದ್ದರೂ ಪೊಲೀಸರು ಗುಂಡು ಹಾರಿಸ್ತಾರೆ ಅಂದರೆ ಏನು? ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರ ಆದೇಶಕ್ಕೆ ಪೊಲೀಸರು ಕಿಮ್ಮತ್ತು ಕೊಡುತ್ತಿಲ್ಲ. ಯಡಿಯೂರಪ್ಪ ಸುಳ್ಳು ಹೇಳುತ್ತಿರಬಹುದು ಅಥವಾ ಅವರ ಮಾತು ಪೊಲೀಸರು ಕೇಳುತ್ತಿಲ್ಲ ಅನ್ನಬೇಕು. ನನ್ನ ಪ್ರಕಾರ ಸರಕಾರದ ಗಮನಕ್ಕೆ ತರದೆ ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಇವರ ಉದ್ದೇಶವೇನು ಅಂದರೆ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಕಂಡಲ್ಲಿ ಗುಂಡಿಕ್ಕಿ ಅಂತ ಹೇಳುತ್ತಾರೆ. ಇದೆಂತಹ ದೇಶ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಜನರ ಹಕ್ಕು ಹಾಗೂ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದು.ಅಮಾನವೀಯವಾಗಿ ಇಬ್ಬರು ಅಮಾಯಕರನ್ನು ಗುಂಡಿಟ್ಟು ಕೊಂದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಜವಾಬ್ದಾರಿಯನ್ನು ಸರಕಾರ ಹೊರಬೇಕು. ಸರಕಾರ ಸಂವಿಧಾನಬಾಹಿರವಾಗಿ ಕೆಲಸ ಮಾಡುತ್ತಿದೆ. ಇದರ ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News