ಎನ್‌ಆರ್‌ಸಿ, ಸಿಎಎಗೆ ವಿರೋಧ: ನಾಟಕ ಅಕಾಡಮಿ ಪ್ರಶಸ್ತಿ ವಾಪಸ್ ನೀಡಲು ವಸಂತ ಬನ್ನಾಡಿ ನಿರ್ಧಾರ
ಬೆಂಗಳೂರು, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿರೋಧಿಸಿ ಕವಿ ಹಾಗೂ ರಂಗ ನಿರ್ದೇಶಕ ವಸಂತ ಬನ್ನಾಡಿ ಅವರು ನಾಟಕ ಅಕಾಡಮಿ ನೀಡಿರುವ ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ಪ್ರತಿಭಟಿಸುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆ.
ಶುಕ್ರವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವಸಂತ ಬನ್ನಾಡಿ, ‘ಪೌರತ್ವ ಕಾಯ್ದೆಯಿಂದ ಮುಸ್ಲಿಮ್ ಸಮುದಾಯವನ್ನು ಹೊರಗಿಟ್ಟಿರುವುದು, ಬಂಧನ ಕೇಂದ್ರಗಳನ್ನು ಸ್ಥಾಪಿಸಿರುವುದು, ಭಾರತ ದೇಶದ ಜನರ ದಾಖಲೆ ಸಂಗ್ರಹವೇ ಅತ್ಯಂತ ಅಪಾಯಕಾರಿ’ ಎಂದು ಆಕ್ರೋಶ ಹೊರಹಾಕಿದರು.
‘ನಾನು ಯಾವುದೇ ಗುಂಪಿನಲ್ಲಿ ಇಲ್ಲ. ಸ್ವಯಂ ಪ್ರೇರಣೆಯಿಂದ ಈ ತೀರ್ಮಾನ ಕೈಗೊಂಡಿದ್ದೇನೆ. ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಸಿಎಎ ಮತ್ತು ಎನ್‌ಆರ್‌ಸಿ ದೇಶದ ಜನತೆ ಭಾವಿಸಿರುವಂತೆ ಸರಳವಾಗಿಲ್ಲ’ ಎಂದು ಅವರು ಇದೇ ವೇಳೆ ಆತಂಕ ವ್ಯಕ್ತಪಡಿಸಿದರು.
‘ನಾನು ರಂಗ ಅಧ್ಯಯನ ಕೇಂದ್ರ ನಾಟಕ ಶಾಲೆ ನಡೆಸುತ್ತಿದ್ದು, 1978ರಿಂದ ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. 2002ರಲ್ಲಿ ನನಗೆ ನಾಟಕ ಅಕಾಡಮಿ ಪ್ರಶಸ್ತಿ ಬಂದಿದ್ದು, ನಾಟಕ ಅಕಾಡಮಿ ಅಧ್ಯಕ್ಷರನ್ನು ಖುದ್ದು ಭೇಟಿ ಮಾಡಿ ನನಗೆ ನೀಡಿರುವ ಪ್ರಶಸ್ತಿಯನ್ನು ಶೀಘ್ರವೇ ಹಿಂದಿರುಗಿಸುವ ಮೂಲಕ ಕಾಯ್ದೆ ವಿರುದ್ಧ ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದೇನೆ’ ಎಂದು ಅವರು ತಿಳಿಸಿದರು.