‘ಕಾಯಕವೇ ಕೈಲಾಸ’ ಪದ ಸಮಾಜ ಸುಧಾರಣೆಗೆ ಬಳಕೆಯಾಗಲಿ: ಮಹಿಮಾ ಪಟೇಲ್

Update: 2019-12-22 17:47 GMT

ಬೆಂಗಳೂರು, ಡಿ.22: ಹನ್ನೇರಡನೆಯ ಶತಮಾನದ ಬಸವಣ್ಣನವರು ನುಡಿದಂತೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡುವುದನ್ನು ಕಾಯಕವೇ ಕೈಲಾಸ ಎಂದು ಕರೆದಿದ್ದಾರೆಯೇ ವಿನಹ ಬರೀ ಸ್ವಾರ್ಥಕ್ಕಾಗಿ ಜೀವನ ನಡೆಸಲು ಕಾಯಕ ಎಂದು ಕರೆದಿಲ್ಲ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. 

ರವಿವಾರ ಮಲ್ಲೇಶ್ವರಂನ ಗುಂಡೂರಾವ್ ಸಭಾಂಗಣದಲ್ಲಿ ಜೆ.ಎಚ್.ಪಟೇಲ್ ಪ್ರತಿಷ್ಠಾನದ ಯುವ ಸಮಾವೇಶ ಹಾಗೂ ಜೌದ್ಯೋಗೀಕರಣ ಮತ್ತು ರಾಷ್ಟ್ರನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜಕಾರಣಿಗಳು ಎಂದರೆ ರೌಡಿಗಳು, ದುಡ್ಡು ಮಾಡುವವರು ಎಂಬ ಭಾವನೆ ಪ್ರಜ್ಞಾವಂತರಲ್ಲಿ ಮೂಡಿದ್ದು, ಇದರಿಂದ, ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜನರು ಇಂತಹ ಭಾವನೆಯಿಂದ ಹೊರ ಬರಲು ಹಾಗೂ ಸದೃಢ ರಾಷ್ಟ್ರದ ನಿರ್ಮಾಣಕ್ಕಾಗಿ ಯುವ ಪೀಳಿಗೆ ಒಟ್ಟಾಗಿ ಭ್ರಷ್ಟಾಚಾರ ರಹಿತವಾಗಿ ದುಡಿಯಬೇಕಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ದೇಶದಲ್ಲಿ ಕುಟುಂಬ ರಾಜಕಾರಣ ಪ್ರಾರಂಭವಾಗಿದ್ದು, ಇದರಿಂದ, ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶಪ್ರೇಮಿ ಜಯಪ್ರಕಾಶ್ ನಾರಾಯಣ ಅವರ ಅನುಯಾಯಿಗಳಾಗಿದ್ದ ಲಾಲು ಪ್ರಸಾದ್ ಯಾದವ್, ಮುಲಾಯಂಸಿಂಗ್ ಯಾದವ್‌ನಂತಹ ನಾಯಕರು ಸ್ವಾರ್ಥ ರಾಜಕಾರಣದ ಹಿಂದೆ ಬಿದ್ದು, ಕುಟುಂಬ ರಾಜಕಾರಣವನ್ನು ಪ್ರಾರಂಭಿಸಿ, ತಮ್ಮ ಮಕ್ಕಳಿಗೆ ಸಿಎಂ, ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆಗಳನ್ನು ನೀಡಿ ಜನರಲ್ಲಿದ್ದ ಆಶಾ ಭಾವನೆಗಳಿಗೆ ತಣ್ಣೀರು ಎರಚಿದರು ಎಂದು ಹೇಳಿದರು. ಸಮಾನತೆ ಹಾಗೂ ಸಹೋದರತ್ವವೇ ಪ್ರಜಾಪ್ರಭುತ್ವ ಎಂಬುದನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಅರ್ಥೈಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಬೇಲಿ ಮಠದ ಶಿವರುದ್ರಸ್ವಾಮಿಗಳು, ಜೆಡಿಯು ರಾಜ್ಯ ಕಾರ್ಯಧ್ಯಕ್ಷ ಜಿ.ವಿ.ರಾಮಚಂದ್ರಯ್ಯ, ಯುವ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸಂಜಯ್‌ಕುಮಾರ್, ಯುವ ಜೆಡಿಯ ರಾಜ್ಯಾಧ್ಯಕ್ಷ ಡಾ.ಕೆ.ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News