ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ

Update: 2019-12-22 18:44 GMT

ಕಟಕ್, ಡಿ.22: ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 63 ರನ್ ಗಳಿಸಿದ ರೋಹಿತ್ ಶರ್ಮಾ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ರನ್ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ 22 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದರು.

ಬರಾಬತಿ ಸ್ಟೇಡಿಯಂನಲ್ಲಿ ರವಿವಾರ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು.

ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಅವರ ಹೆಸರಲ್ಲಿತ್ತು. 1997ರಲ್ಲಿ ಆರಂಭಿಕ ಆಟಗಾರನಾಗಿ ಜಯಸೂರ್ಯ ಒಟ್ಟು 2,387 ರನ್ ಗಳಿಸಿದ್ದರು.

ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಸೆಹ್ವಾಗ್ 2008ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 2,355 ರನ್ ಗಳಿಸಿದ್ದರು.

 ರೋಹಿತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 53.12ರ ಸರಾಸರಿಯಲ್ಲಿ ತಲಾ 10 ಶತಕ ಹಾಗೂ ಅರ್ಧಶತಕಗಳ ಸಹಿತ 2,442 ರನ್ ಗಳಿಸಿ 2019ನೇ ವರ್ಷವನ್ನು ಕೊನೆಗೊಳಿಸಿದರು. ರೋಹಿತ್ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ರೋಹಿತ್ ಟೆಸ್ಟ್‌ನಲ್ಲಿ 556 ರನ್ ಹಾಗೂ ಟ್ವೆಂಟಿ-20ಯಲ್ಲಿ 396 ರನ್ ಗಳಿಸಿದ್ದರು.

ರೋಹಿತ್‌ಗೆ 3ನೇ ಪಂದ್ಯಕ್ಕಿಂತ ಮೊದಲು ಲಂಕಾದ ಮಾಜಿ ನಾಯಕ ಜಯಸೂರ್ಯರ 22 ವರ್ಷ ಹಳೆಯ ದಾಖಲೆ ಮುರಿಯಲು ಕೇವಲ 9 ರನ್ ಅಗತ್ಯವಿತ್ತು. ಭಾರತ ಇನಿಂಗ್ಸ್ ನ 3ನೇ ಓವರ್‌ನಲ್ಲಿ ಶೆಲ್ಡನ್ ಕಾಟ್ರೆಲ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ರೋಹಿತ್ 1997ರಲ್ಲಿ ಜಯಸೂರ್ಯ ನಿರ್ಮಿಸಿದ್ದ ದಾಖಲೆ ಮುರಿದರು.

ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ವಿಂಡೀಸ್ ವಿರುದ್ಧ ಸರಣಿಯ ಎರಡನೇ ಪಂದ್ಯದಲ್ಲಿ 159 ರನ್ ಗಳಿಸಿದ್ದರು. ಈ ಮೂಲಕ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದ ಸಾಧನೆ ಮಾಡಿದ್ದರು.

 ಈ ವರ್ಷಾರಂಭದಲ್ಲಿ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಐದು ಶತಕಗಳನ್ನು ಸಿಡಿಸಿದ್ದರು. ವಿಶ್ವಕಪ್ ಟೂರ್ನಿಯೊಂದರಲ್ಲಿ ಐದು ಬಾರಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News