ಎನ್‌ಆರ್‌ಸಿ ಕಾಯ್ದೆ ಅಸ್ಸಾಂಗೆ ಮಾತ್ರ ಸೀಮಿತ: ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ
ಬೆಂಗಳೂರು, ಡಿ.23: ಕೇಂದ್ರ ಸರಕಾರ ಸಂಸತ್‌ನಲ್ಲಿ ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗುವುದಿಲ್ಲ. ಹಾಗೂ ಎನ್‌ಆರ್‌ಸಿ ಕಾಯ್ದೆಯು ಸದ್ಯಕ್ಕೆ ಅಸ್ಸಾಮ್‌ಗೆ ಮಾತ್ರ ಸೀಮಿತವೆಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ಜನಿಸಿದ ಮುಸ್ಲಿಮರಿಗೆ ಯಾವುದೇ ರೀತಿಯಲ್ಲಿ ಬಾಧಕವಿಲ್ಲ. ಕಾಯ್ದೆಯು ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ಹಿಂಸಾಚಾರಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್ಖ್, ಕ್ರಿಶ್ಚಿಯನ್, ಬೌದ್ಧರಿಗೆ ಪೌರತ್ವ ನೀಡುವುದಾಗಿದೆ ಎಂದರು.
ಸಿಎಎ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮುಸ್ಲಿಮ್ ಹಾಗೂ ವಿದ್ಯಾರ್ಥಿಗಳನ್ನು ಪ್ರಚೋದಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ಕೇಂದ್ರದ ಬಿಜೆಪಿ ಸರಕಾರ ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಎನ್‌ಆರ್‌ಸಿ ಕಾಯ್ದೆಯು ಸದ್ಯಕ್ಕೆ ಅಸ್ಸಾಮ್‌ಗೆ ಮಾತ್ರ ಸೀಮಿತವಾಗಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ-ಸೂಚನೆ ಪಡೆದು ಕೇಂದ್ರ ಸರಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನಿಖೆ ಆದೇಶಿಸಿದ್ದಾರೆ. ಇದರಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ್ದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ರಾಮ್‌ದಾಸ್ ಅಠಾವಳೆ, ಕೇಂದ್ರ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ