ಐದು ವಿಕೆಟ್ ಗೊಂಚಲು ಪಡೆದ ಕಿರಿಯ ವಯಸ್ಸಿನ ವೇಗದ ಬೌಲರ್ ನಸೀಂ ಶಾ

Update: 2019-12-23 18:43 GMT

ಕರಾಚಿ, ಡಿ.23: ಪಾಕಿಸ್ತಾನದ ನಸೀಂ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಕಬಳಿಸಿದ ಅತ್ಯಂತ ಕಿರಿಯ ವಯಸ್ಸಿನ ವೇಗದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ 31 ರನ್‌ಗೆ 5 ವಿಕೆಟ್ ಪಡೆದು ಈ ಸಾಧನೆ ಮಾಡಿದರು. 16ನೇ ವರ್ಷ, 307ನೇ ದಿನದಲ್ಲಿ ಶಾ ಈ ಸಾಧನೆ ಮಾಡುವುದರೊಂದಿಗೆ ಪಾಕ್‌ನ ಸಹ ವೇಗದ ಬೌಲರ್ ಮುಹಮ್ಮದ್ ಆಮಿರ್ ದಾಖಲೆ ಮುರಿದರು. ಆಮಿರ್ 17 ವರ್ಷ ಹಾಗೂ 257 ದಿನಗಳಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲನ್ನು ಪಡೆದಿದ್ದರು. ನಸೀಂ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಕಿರಿಯ ವಯಸ್ಸಿನ ಬೌಲರ್ ಅಲ್ಲ. ಈ ದಾಖಲೆಯು ಪಾಕಿಸ್ತಾನದ ಮಾಜಿ ಸ್ಪಿನ್ ಬೌಲರ್ ನಸೀಂ-ವುಲ್-ಘನಿ ಅವರ ಹೆಸರಲ್ಲಿದೆ. ಘನಿ 1958ರಲ್ಲಿ ಜಾರ್ಜ್‌ಟೌನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತನ್ನ 16 ವರ್ಷ, 303ನೇ ದಿನದ ವಯಸ್ಸಿನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ನಸೀಂ ಶಾ ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ್ದರು. ಆ ಪಂದ್ಯದಲ್ಲಿ 154 ರನ್ ಗಳಿಸಿದ್ದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್‌ರನ್ನು ಔಟ್ ಮಾಡಿದ್ದರು.

16ರ ವಯಸ್ಸಿನ ನಸೀಂ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ್ದ ಕಿರಿಯ ವಯಸ್ಸಿನ ಕ್ರಿಕೆಟಿಗ ಎನಿಸಿಕೊಂಡಿದ್ದರು. ನಸೀಂ ಮುಂದಿನ ವರ್ಷ ಜನವರಿ 17ರಿಂದ ಫೆ.9ರ ತನಕ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News