ಬಚ್ಚಲಿನಲ್ಲಿ ಜಾರಿ ಬಿದ್ದ ಬಳಿಕ ನೆನಪಿನ ಶಕ್ತಿ ಕಳೆದುಕೊಂಡಿದ್ದೆ: ಬ್ರೆಝಿಲ್ ಅಧ್ಯಕ್ಷ ಬೊಲ್ಸೊನಾರೊ

Update: 2019-12-25 18:38 GMT

ಸಾವೊ ಪೌಲೊ (ಬ್ರೆಝಿಲ್), ಡಿ. 25: “ನನ್ನ ಅಧಿಕೃತ ನಿವಾಸದಲ್ಲಿ ಬಿದ್ದು ತಲೆ ನೆಲಕ್ಕೆ ಬಡಿದ ಬಳಿಕ ಸ್ವಲ್ಪ ಕಾಲ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದೆ” ಎಂದು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮಂಗಳವಾರ ಹೇಳಿದ್ದಾರೆ.

ಅಲ್ವೊರಾಡೊ ಅರಮನೆಯ ಸ್ನಾನಗೃಹದಲ್ಲಿ ಸೋಮವಾರ ರಾತ್ರಿ 64 ವರ್ಷದ ಅಧ್ಯಕ್ಷರು ಜಾರಿ ಬಿದ್ದಿದ್ದರು. 2018 ಸೆಪ್ಟಂಬರ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದು, ಗಾಯಗೊಂಡಿದ್ದರು.

‘‘ಆ ಕ್ಷಣದಲ್ಲಿ ನಾನು ನೆನಪುಗಳನ್ನು ಕಳೆದುಕೊಂಡಿದ್ದೆ. ಮಾರನೇ ದಿನ, ಅಂದರೆ ಇಂದು ಬೆಳಗ್ಗೆ, ಹಲವಾರು ವಿಷಯಗಳನ್ನು ನೆನಪಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾದೆ. ಈಗ ನಾನು ಸರಿಯಾಗಿದ್ದೇನೆ’’ ಎಂದು ಬ್ಯಾಂಡ್ ಟೆಲಿವಿಶನ್‌ಗೆ ನೀಡಿದ ಟೆಲಿಫೋನ್ ಸಂದರ್ಶನವೊಂದರಲ್ಲಿ ಅವರು ಹೇಳಿದರು.

‘‘ನಾನು ನಿನ್ನೆ ಏನು ಮಾಡಿದೆ ಎನ್ನುವುದು ನನಗೆ ಗೊತ್ತಿಲ್ಲ’’ ಎಂದರು.

ಬೊಲ್ಸೊನಾರೊ ಸೋಮವಾರ ರಾತ್ರಿಯನ್ನು ಬ್ರೆಸೀಲಿಯದಲ್ಲಿರುವ ಸಶಸ್ತ್ರ ಪಡೆಗಳ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಅವರ ಕಚೇರಿ ತಿಳಿಸಿದೆ.

ಜನವರಿ 1ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಒಂದಿಲ್ಲೊಂದು ಅನಾರೋಗ್ಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ನಾನು ಚರ್ಮದ ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದೇನೆ ಎಂದು ಈ ತಿಂಗಳ ಆರಂಭದಲ್ಲಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News