ಎನ್‌ಆರ್‌ಸಿ, ಸಿಎಎ ವಿರುದ್ಧ ಬೆಂಗಳೂರಿನಲ್ಲಿ ಮಹಿಳೆಯರ ಪ್ರತಿಭಟನೆ

Update: 2019-12-26 15:21 GMT

ಬೆಂಗಳೂರು, ಡಿ.26: ಕೇಂದ್ರ ಸರಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ ಸಂಘಟನೆಯ ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಬಹುತ್ವ ಭಾರತಕ್ಕೆ ಮಾರಕವಾಗಿರುವ, ಸಂವಿಧಾನದ ಮುಖ್ಯ ಆಶಯವಾಗಿರುವ ಜಾತ್ಯತೀತ ಮೌಲ್ಯಕ್ಕೆ ಕಂಟಕವಾಗಿರುವ ಸಿಎಎ ಕಾಯ್ದೆ ಯಾವುದೇ ಕಾರಣಕ್ಕೂ ದೇಶದಲ್ಲಿ ಜಾರಿಯಾಗಬಾರದು. ಕೇಂದ್ರ ಸರಕಾರ ಈ ಕಾಯ್ದೆಯನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಪ್ರತಿಭಟನಕಾರರು ಘೋಷಣೆ ಕೂಗುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ದೇಶದ ಸ್ವಾತಂತ್ರಕ್ಕಾಗಿ ಜಾತಿ, ಧರ್ಮವನ್ನು ಮೀರಿ ಜಾತ್ಯತೀತವಾಗಿ ಹೋರಾಟ ಮಾಡಿದರು. ಹಾಗೂ ಇವತ್ತಿಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಜಾತಿ, ಧರ್ಮದ ಜನತೆ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಇಂತಹ ಬಹುಧರ್ಮಿಯ ಭಾರತವನ್ನು ಬಿಜೆಪಿ ಸರಕಾರ ನಾಶ ಮಾಡಲು ಹೊರಟಿರುವುದು ಸರಿಯಲ್ಲವೆಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಸಿಎಎ ಹಾಗೂ ಎನ್‌ಆರ್‌ಸಿ ಮೂಲಕ ದೇಶದ್ರೋಹದ ಕೆಲಸದಲ್ಲಿ ತೊಡಗಿದೆ. ಅದನ್ನು ವಿರೋಧಿಸಿ ದೇಶದ ಪ್ರಜಾಪ್ರಭತ್ವವನ್ನು ಎತ್ತಿ ಹಿಡಿಯುವುದು ಭಾರತೀಯರಾದ ನಮ್ಮ ಕರ್ತವ್ಯವೆಂದು ಹೋರಾಟಗಾರ್ತಿ ಅವನಿ ತಿಳಿಸಿದರು. ಈ ವೇಳೆ ಸಾವಿರಾರು ಹೋರಾಟಗಾರರು ಇಂಕ್ವಿಲಾಬ್ ಝಿಂದಾಬಾದ್ ಘೋಷಣೆ ಕೂಗುವ ಮೂಲಕ ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News