ಕಂಕಣ ಸೂರ್ಯಗ್ರಹಣ ಎಫೆಕ್ಟ್: ಬೆಂಗಳೂರಿನ ರಸ್ತೆಗಳು, ವಿಧಾನಸೌಧ ಖಾಲಿ ಖಾಲಿ !

Update: 2019-12-26 13:57 GMT

ಬೆಂಗಳೂರು, ಡಿ. 26: ಈ ದಶಕದ ಕೊನೆಯ ಮತ್ತು ಅಪರೂಪದ ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ರಾಜಧಾನಿ ಬೆಂಗಳೂರಿನ ಬಹುತೇಕ ರಸ್ತೆಗಳು ಅಕ್ಷರಶಃ ಬಿಕೋ ಎನ್ನುತ್ತಿದ್ದವು.

ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ವಿಧಾನಸೌಧ, ವಿಕಾಸಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಯಾವೊಬ್ಬ ಸಚಿವರು ಸುಳಿಯಲಿಲ್ಲ. ಹೀಗಾಗಿ ಶಕ್ತಿಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಿದರು.

ಸೂರ್ಯಗ್ರಹಣದ ಹಿನ್ನೆಲೆ ಮುಖ್ಯಮಂತ್ರಿ ಮತ್ತು ಸಚಿವರು ಯಾರು ವಿಧಾನಸೌಧಕ್ಕೆ ಆಗಮಿಸಲಿಲ್ಲ, ಸಾರ್ವಜನಿಕರು ಕೂಡ ಶಕ್ತಿಕೇಂದ್ರದಲ್ಲಿ ಕಾಣಸಿಗಲಿಲ್ಲ. ಹೀಗಾಗಿ ವಿಧಾನಸೌಧದ ಕಾರಿಡಾರ್, ಪಾರ್ಕಿಂಗ್, ಕ್ಯಾಂಟೀನ್ ಸ್ಥಳ ಸೇರಿದಂತೆ ಎಲ್ಲೆಡೆ ಖಾಲಿ ಖಾಲಿಯಾಗಿತ್ತು.

ಗ್ರಹಣದ ವೇಳೆ ಮನೆಯಿಂದ ಹೊರ ಬರುವುದು, ಹೊರಗೆ ಸಂಚರಿಸುವುದು ‘ಅಪಾಯಕಾರಿ’ ಎಂದು ಕೆಲ ಜ್ಯೋತಿಷಿಗಳು ಜನರಲ್ಲಿ ಭೀತಿ ಸೃಷ್ಟಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 8ಗಂಟೆಯಿಂದ 11ಗಂಟೆಯ ವರೆಗೆ ನಗರದ ಬಹುತೇಕ ರಸ್ತೆಗಳು ಖಾಲಿ, ವೃತ್ತಗಳಲ್ಲಿ ಯಾವುದೇ ವಾಹನಗಳು ಇರಲಿಲ್ಲ.

ಇನ್ನು ಬಿಎಂಟಿಸಿ ಬಸ್ಸುಗಳಲ್ಲಿಯೂ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿದ್ದವು. ಸೂರ್ಯಗ್ರಹಣ ‘ಅಪಶಕುನ’ವೆಂಬ ನಂಬಿಕೆ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಈ ಮಧ್ಯೆ ನಗರದ ಪುರಭವನ, ನೆಹರೂ ತಾರಾಲಯ ಸೇರಿ ವಿವಿಧೆಡೆ ಅಪರೂಪದ ಸೂರ್ಯಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿದರು.

ಮನೆಯಿಂದ ಕದಲದ ಸಿಎಂ: ಸಿಎಂ ಯಡಿಯೂರಪ್ಪ ಜ್ಯೋತಿಷಿಗಳ ಸಲಹೆ ಹಿನ್ನೆಲೆಯಲ್ಲಿ ಸೂರ್ಯಗ್ರಹಣದ ವೇಳೆ ಯಾರನ್ನೂ ಭೇಟಿ ಮಾಡದೆ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ಧವಳಗಿರಿ ನಿವಾಸದಲ್ಲೆ ಕಾಲ ಕಳೆದರು. ಗ್ರಹಣ ಮುಕ್ತಾಯದ ಬಳಿಕ ಪೂಜೆ ನೆರವೇರಿಸಿದರು.

ಗ್ರಹಣ ಹಿನ್ನೆಲೆ ಎರಡು ದಿನಗಳ ಹಿಂದಷ್ಟೇ ಕೇರಳಕ್ಕೆ ತೆರಳಿ ವಿಶೇಷ ಹೋಮ- ಹವನ ನೆರವೇರಿಸಿದ್ದ ಯಡಿಯೂರಪ್ಪ, ಅದರ ಮುಂದುವರೆದ ಭಾಗವಾಗಿ ನಿವಾಸದಲ್ಲೇ ವಿಶೇಷ ಪೂಜೆ ಸಲ್ಲಿಸಿ ಗ್ರಹಣದ ದೋಷ ಪರಿಹಾರಕ್ಕೆ ಜ್ಯೋತಿಷಿಗಳ ಸಲಹೆ ಪಾಲಿಸಿದರು ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News