×
Ad

ಗೋಮಾಳ ಭೂಮಿಯಲ್ಲಿ ಏಸು ಕ್ರಿಸ್ತನ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಇಲ್ಲ: ಸಚಿವ ಅಶೋಕ್

Update: 2019-12-27 22:21 IST

ಬೆಂಗಳೂರು, ಡಿ. 27: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿ ಗ್ರಾಮದ ‘ಹಾರೋಬೆಲೆ ಕಪಾಲಿ ಬೆಟ್ಟ ಅಭಿವೃದ್ಧಿ ಟ್ರಸ್ಟ್’ಗೆ ಮಂಜೂರು ಮಾಡಿರುವ 10ಎಕ್ರೆ ಗೋಮಾಳ ಭೂಮಿಯಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಲ್ಲಹಳ್ಳಿ ಗ್ರಾಮದ ಸರ್ವೆ ನಂ.283ರಲ್ಲಿ 231 ಎಕರೆ ಸರಕಾರಿ ಗೋಮಾಳವಿದೆ. ಗ್ರಾಮದಲ್ಲಿ ಸುಮಾರು 2ಸಾವಿರ ಜಾನುವಾರುಗಳಿದ್ದು, 500 ಎಕರೆ ಗೋಮಾಳದ ಅಗತ್ಯವಿದೆ. ಆದರೆ, ಜಾನುವಾರುಗಳ ಮೇವಿಗೆ ಗೋಮಾಳದ ಕೊರತೆ ಇರುವ ಸಂದರ್ಭದಲ್ಲೆ ಟ್ರಸ್ಟ್‌ಗೆ 10 ಎಕರೆ ಭೂಮಿಯನ್ನು 2017ರಲ್ಲಿ ಮಂಜೂರು ಮಾಡಿದ್ದು, ಸರಕಾರದ ಮಾರ್ಗಸೂಚಿ ದರ 10 ಲಕ್ಷ ರೂ.ಪಾವತಿಸಲು ಸಂಪುಟದಲ್ಲಿ ತೀರ್ಮಾನಿಸಿ, ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಲಾಗಿತ್ತು ಎಂದರು.

ಇದೀಗ ಅದೇ ಭೂಮಿಯಲ್ಲಿ ಏಸು ಕ್ರಿಸ್ತನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅದಕ್ಕೆ ನೆರವು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಸರಕಾರಿ ಭೂಮಿಯನ್ನು ಯಾರೂ ದಾನ ನೀಡಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹಾರೋಬೆಲೆ ಕಪಾಲಿ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಿರುವ ಸಂಬಂಧ ಸಂಪುಟದ ನಿರ್ಧಾರದ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದು, ವರದಿ ಬಂದ ಕೂಡಲೇ ಈ ಸಂಬಂಧ ಕೂಲಂಕಷ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರಕಾರದ ಗೋಮಾಳ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ವಿಶ್ವದಲ್ಲೆ ಅತ್ಯಂತ ಎತ್ತರದ ಏಸು ಕ್ರಿಸ್ತನ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೆ, ಹಾರೋಬೆಲೆ ಕಪಾಲಿ ಬೆಟ್ಟದ ಹೆಸರು ಬದಲಾವಣೆಗೆ ಅವಕಾಶ ಕೊಡುವುದಿಲ್ಲ ಎಂದು ಅಶೋಕ್ ಇದೇ ವೇಳೆ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News