ಮೋದಿಯ ನೆರಳಿನಿಂದ ಹೊರಬಂದಿರುವ ಅಮಿತ್ ಶಾ

Update: 2019-12-27 18:31 GMT

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ‘‘ಎನ್‌ಡಿಎ ಸರಕಾರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ತ್ರಿವಳಿ ತಲಾಖ್, ವಿಧಿ 370ರ ರದ್ದತಿ, ರಾಮ ಜನ್ಮಭೂಮಿ ತೀರ್ಪು ಮತ್ತು ಈಗ ಪೌರತ್ವ (ತಿದ್ದುಪಡಿ) ಕಾಯ್ದೆ....ಹೀಗೆ ಈಗಾಗಲೇ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದೆ. ಈ ಎಲ್ಲ ಸಿಕ್ಸರ್‌ಗಳು 2014ರ ಲೋಕಸಭಾ ಚುನಾವಣೆಯ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದ ಅಮಿತ್ ಶಾ ಅವರ ಬ್ಯಾಟ್‌ನಿಂದ ಬಂದಿವೆ’ ಎಂದು ಟ್ವೀಟಿಸಿರುವುದನ್ನು ವರದಿಯು ಬೆಟ್ಟ ಮಾಡಿದೆ.


ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತನ್ನ ರಾಜಕೀಯ ವೃತ್ತಿಜೀವನದುದ್ದಕ್ಕೂ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ನೆರಳಿನಡಿಯೇ ಇದ್ದು ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದರು. ಕೇಂದ್ರದಲ್ಲಿ ಎನ್‌ಡಿಎ-2 ಸರಕಾರ ಅಧಿಕಾರಕ್ಕೆ ಬಂದು ಇನ್ನೂ ಏಳು ತಿಂಗಳುಗಳು ತುಂಬಿಲ್ಲ,ಅಷ್ಟರಲ್ಲೇ ಗೃಹಸಚಿವರಾಗಿ ತನ್ನದೇ ಆದ ಛಾಪು ಮೂಡಿಸಿರುವ ಅವರು ಈಗ ಮೋದಿಯವರ ನೆರಳಿನಿಂದ ಸಂಪೂರ್ಣವಾಗಿ ಹೊರಬಂದಿದ್ದು, ತಾನೆಂತಹ ನಾಯಕ ಮತ್ತು ಆಡಳಿತಗಾರ ಎನ್ನುವುದನ್ನು ತೋರಿಸಿದ್ದಾರೆ ಎಂದು ಸುದ್ದಿ ಜಾಲತಾಣ ‘ದಿ ಪ್ರಿಂಟ್’ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ‘‘ಎನ್‌ಡಿಎ ಸರಕಾರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ತ್ರಿವಳಿ ತಲಾಖ್, ವಿಧಿ 370ರ ರದ್ದತಿ, ರಾಮ ಜನ್ಮಭೂಮಿ ತೀರ್ಪು ಮತ್ತು ಈಗ ಪೌರತ್ವ (ತಿದ್ದುಪಡಿ) ಕಾಯ್ದೆ....ಹೀಗೆ ಈಗಾಗಲೇ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದೆ. ಈ ಎಲ್ಲ ಸಿಕ್ಸರ್‌ಗಳು 2014ರ ಲೋಕಸಭಾ ಚುನಾವಣೆಯ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದ ಅಮಿತ್ ಶಾ ಅವರ ಬ್ಯಾಟ್‌ನಿಂದ ಬಂದಿವೆ’ ಎಂದು ಟ್ವೀಟಿಸಿರುವುದನ್ನು ವರದಿಯು ಬೆಟ್ಟ ಮಾಡಿದೆ.
 ವೃತ್ತಪತ್ರಿಕೆಗಳು ಮತ್ತು ಟಿವಿ ಸ್ಕ್ರೀನ್‌ಗಳ ಹೆಡ್‌ಲೈನ್‌ಗಳನ್ನು ಶಾ ಆವರಿಸಿಕೊಂಡಿದ್ದಾರೆ. ಮೋದಿ ಕೂಡ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ತನ್ನ ಸಂಭಾವ್ಯ ಉತ್ತರಾಧಿಕಾರಿ ತನ್ನದೇ ಆದ ಸ್ಥಾನವನ್ನು ಕಂಡುಕೊಳ್ಳಲಿ ಎಂದು ಬಯಸಿರುವಂತಿದೆ. ಶಾ ಅವರ ಕಾರ್ಯಕ್ಷೇತ್ರದಲ್ಲಿ ಮೋದಿಯವರು ಹಸ್ತಕ್ಷೇಪ ಮಾಡುವುದು ಕಡಿಮೆ. ಮೋದಿ ಕಳೆದ ರವಿವಾರ ದಿಲ್ಲಿಯಲ್ಲಿ ರ್ಯಾಲಿಯೊಂದರಲ್ಲಿ ದೇಶವ್ಯಾಪಿ ಎನ್‌ಆರ್‌ಸಿ ಬಗ್ಗೆ ಸರಕಾರದಲ್ಲಿ ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಅಪರೂಪಕ್ಕೆ ಇಂತಹ ಹಸ್ತಕ್ಷೇಪ ಮಾಡಿದ್ದಾರೆ. ಎನ್‌ಆರ್‌ಸಿ ಶಾ ಅವರ ನೆಚ್ಚಿನ ಯೋಜನೆಯಾಗಿದೆ.

ಮೋದಿಯವರ ಹೇಳಿಕೆಯ ಬಳಿಕ ದೇಶವ್ಯಾಪಿ ಎನ್‌ಆರ್‌ಸಿ ಜಾರಿಗೊಳಿಸುವ ಶಾ ಅವರ ಮಹತ್ವಾಕಾಂಕ್ಷೆ ಹಿನ್ನೆಲೆಗೆ ಸರಿದಿರಬಹುದು, ಆದರೆ ಅದು ಸರಕಾರದಲ್ಲಿ ಅವರ ನಂ.2 ಎಂಬ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಶಾ ಲೋಕಸಭೆಯಲ್ಲಿರಲಿ ಅಥವಾ ರಾಜ್ಯಸಭೆಯಲ್ಲಿರಲಿ, ಆಡಳಿತ ಪಕ್ಷದ ಆಸನಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತವೆ. ಇದು ಪಕ್ಷದ ಸಂಸದರ ಮೇಲೆ ಶಾ ಅವರ ಹಿಡಿತವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸರಕಾರದಲ್ಲಿ ಮೋದಿಯವರ ನಂತರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ಅವರು ಏಳು ಸಚಿವ ಸಮಿತಿಗಳ ಮುಖ್ಯಸ್ಥರೂ ಆಗಿದ್ದಾರೆ. ಇಂತಹ ಎರಡು ಸಮಿತಿಗಳ ಮುಖ್ಯಸ್ಥರಾಗಿದ್ದ ರಾಜನಾಥ ಸಿಂಗ್ ಮತ್ತು ನಿತಿನ್ ಗಡ್ಕರಿಯಂತಹ ಬಲಿಷ್ಠ ನಾಯಕರು ಶಾ ಅವರಿಗಾಗಿ ತಮ್ಮ ಸ್ಥಾನಗಳಿಂದ ಕೆಳಗಿಳಿದಿದ್ದಾರೆ. ಶಾ ಅವರನ್ನು ಮೋದಿ ಸರಕಾರದ ಪ್ರಣವ್ ಮುಖರ್ಜಿ ಎಂದು ಪರಿಗಣಿಸಲಾಗುತ್ತಿದೆ. ಆದರೆ ಮನಮೋಹನ ಸಿಂಗ್ ಸರಕಾರದಲ್ಲಿ ವಿತ್ತಸಚಿವರಾಗಿದ್ದ ಮುಖರ್ಜಿ ಶಾ ಅವರಷ್ಟು ರಾಜಕೀಯ ಹಿಡಿತವನ್ನು ಹೊಂದಿರಲಿಲ್ಲ ಎಂದು ವರದಿಯು ಹೇಳಿದೆ.

ಗುಜರಾತ್ ರಾಜ್ಯ ಚದುರಂಗ ಸಂಘದ ಮಾಜಿ ಅಧ್ಯಕ್ಷರಾಗಿರುವ ಶಾ ರಾಜಕೀಯ ಚದುರಂಗದಾಟದಲ್ಲಿ ತನ್ನ ಪ್ರಾಬಲ್ಯಕ್ಕೆ ವಿಫುಲ ಉದಾಹರಣೆಗಳನ್ನು ಪ್ರದರ್ಶಿಸಿದ್ದಾರೆ. ಪ್ರತಿಪಕ್ಷಕ್ಕೆ ಚೆಕ್‌ಮೇಟ್ ನೀಡುವ ಮುನ್ನ ಸೈನಿಕ, ಒಂಟೆ, ಕುದುರೆ, ಆನೆ, ಮಂತ್ರಿ ಸೇರಿದಂತೆ ಅವರ ಪ್ರತಿಯೊಂದು ಕಾಯಿಯನ್ನೂ ಕಬಳಿಸಿದ್ದಾರೆ.

ಆಡಳಿತಗಾರರಾಗಿ ಮೋದಿ ಮತ್ತು ಶಾ ಅವರು ಸಿಕ್ಸರ್‌ಗಳನ್ನು ಬಾರಿಸುವುದರಲ್ಲಿ ಅಪಾಯಗಳನ್ನು ಲೆಕ್ಕಿಸುತ್ತಿಲ್ಲ. ನೋಟು ನಿಷೇಧ ಮತ್ತು ಅವಸರದಲ್ಲಿ ಜಿಎಸ್‌ಟಿ ಜಾರಿ ಇದಕ್ಕೆ ಎರಡು ಉದಾಹರಣೆಗಳೆನ್ನಬಹುದು. ಸಂತೋಷ್ ಹೇಳಿರುವಂತೆ ಶಾ ಬಾರಿಸಿರುವ ನಾಲ್ಕು ಸಿಕ್ಸರ್‌ಗಳ ಪೈಕಿ ಅಯೋಧ್ಯೆ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತು ತ್ರಿವಳಿ ತಲಾಖ್‌ನ ಅಪರಾಧೀಕರಣ ಇವು ಮಾತ್ರ ಈವರೆಗಿನ ಕ್ಲೀನ್ ಹಿಟ್ ಆಗಿರುವಂತಿದೆ. ವಿಧಿ 370ರ ರದ್ದತಿಯ ಪರಿಣಾಮವನ್ನು ಇನ್ನೂ ಕಾದು ನೋಡಬೇಕಿದೆ ಮತ್ತು ಎನ್‌ಆರ್‌ಸಿ ಕುರಿತು ಮೋದಿ ಸ್ಪಷ್ಟೀಕರಣದ ಬಳಿಕ ಸಿಎಎ ಗುರಿ ತಪ್ಪಿದ ಹೊಡೆತವಾಗಿ ಅಂತ್ಯಗೊಳ್ಳಬಹುದು.
2019ರ ಸಾರ್ವತ್ರಿಕ ಚುನಾವಣೆಯಲ್ಲಿನ ಬೃಹತ್ ಜನಾದೇಶವನ್ನು ಮೋದಿ ಅವರು ತಪ್ಪಾಗಿ ವ್ಯಾಖ್ಯಾನಿಸಿರುವಂತಿದೆ. ಅದು ‘ಹಿಂದೂ ಹೃದಯ ಸಾಮ್ರಾಟ’ ಮೋದಿ ಅವರಿಗಾಗಿರಲಿಲ್ಲ. ಬಾಲಕೋಟ್ ವಾಯುದಾಳಿ ಕೆಲಮಟ್ಟಿಗೆ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸಿರಬಹುದು. ಆದರೆ ಮೋದಿಯವರ ಅಭಿವೃದ್ಧಿ ಅಜೆಂಡಾ ಮತ್ತು ಯಾವುದೇ ರಾಜಕೀಯ ಪರ್ಯಾಯದ ಕೊರತೆ ಬಿಜೆಪಿ ಲೋಕಸಭೆಯನ್ನು 303 ಸ್ಥಾನಗಳನ್ನು ಗೆಲ್ಲಲು ಕಾರಣವಾಗಿತ್ತು ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲಿ ಬಾಲಕೋಟ್ ದಾಳಿಯ ಉಲ್ಲೇಖ ಮತ್ತು ಕೋಮು ಧ್ರುವೀಕರಣದ ಹೇಳಿಕೆಗಳು ಜನರ ಚಪ್ಪಾಳೆಯನ್ನು ಗಿಟ್ಟಿಸಿದ್ದವಾದರೂ ಮೋದಿ ಸರಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಅಂತಹ ಇನ್ನಷ್ಟು ಯೋಜನೆಗಳ ನಿರೀಕ್ಷೆ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು ಎಂದು ವರದಿಯು ವಿಶ್ಲೇಷಿಸಿದೆ.

ಆದರೆ ಮೋದಿಯವರ ಎರಡನೇ ಇನಿಂಗ್ಸ್‌ನಲ್ಲಿ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿವೆ. ಸರಕಾರವು ಬಿಜೆಪಿ ಮತ್ತು ಆರೆಸ್ಸೆಸ್‌ನ ಸೈದ್ಧಾಂತಿಕ ಅಜೆಂಡಾಕ್ಕಾಗಿ ತನ್ನನ್ನು ಮುಡಿಪಾಗಿಸಿಕೊಳ್ಳುತ್ತಿದೆ. ಇದಕ್ಕೆ ಆಡಳಿತ ಪಾಳಯದಿಂದ ಎರಡು ವಿವರಣೆಗಳಿವೆ. ಮೊದಲನೆಯದು, ಶಾ ಅವರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರದ ಅತ್ಯಂತ ಬಲಿಷ್ಠ ಗೃಹಸಚಿವ ಎಂಬ ಛಾಪನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಮತ್ತು ಸರಕಾರದ ಆದ್ಯತೆಗಳಲ್ಲಿ ಬದಲಾವಣೆಗಳು ಸರಕಾರದಲ್ಲಿ ಶಾ ಪ್ರವೇಶದೊಂದಿಗೆ ಕಾಕತಾಳೀಯವಾಗಿವೆ. ಎರಡನೆಯದು ಲೋಕಸಭಾ ಚುನಾವಣೆಯ ಬಳಿಕ ಪ್ರತಿಪಕ್ಷ ಬಸವಳಿದು ಹೋಗಿರುವುದರಿಂದ ಸಂಸತ್ತಿನಲ್ಲಿ ಪಕ್ಷದ ಸೈದ್ಧಾಂತಿಕ ಅಜೆಂಡಾಕ್ಕೆ ಒಪ್ಪಿಗೆ ಪಡೆದುಕೊಳ್ಳಲು ಇದು ಸಕಾಲವಾಗಿದೆ. ಆದರೆ ಈ ವಿವರಣೆಗಳಲ್ಲಿ ಜಾಗತಿಕ ಮುತ್ಸದ್ದಿಯಾಗುವ ಮತ್ತು ದೇಶದಲ್ಲಿ ಕೋಟ್ಯಂತರ ಬದುಕುಗಳನ್ನು ಬದಲಿಸಿದ ದೂರದೃಷ್ಟಿಯ ಹರಿಕಾರನೆಂಬ ಹೆಗ್ಗಳಿಕೆಯನ್ನು ಪಡೆಯುವ ತನ್ನ ಗುರಿಯನ್ನು ಮೋದಿ ಕೈಬಿಟ್ಟಿದ್ದಾರೆಯೇ ಎನ್ನುವುದು ಸ್ಪಷ್ಟವಿಲ್ಲ. 2002ರ ಗುಜರಾತ್ ದಂಗೆಗಳ ಕರಿನೆರಳಿನಿಂದ ಹೊರಬಂದು ‘ವಿಕಾಸ ಪುರುಷ’ ಎಂಬ ವರ್ಚಸ್ಸು ಗಳಿಸಲು ಅವರಿಗೆ ವರ್ಷಗಳೇ ಬೇಕಾಗಿದ್ದವು. ಕಳೆದ ಏಳು ತಿಂಗಳ ಆಡಳಿತ ವೈಖರಿಯು ಅವೆಲ್ಲವನ್ನೂ ಕಿತ್ತುಕೊಳ್ಳುವ ಬೆದರಿಕೆಯನ್ನೊಡ್ಡಿತ್ತು. ರವಿವಾರದ ತನ್ನ ಭಾಷಣದಲ್ಲಿ ಎನ್‌ಆರ್‌ಸಿ ಕುರಿತು ವಿವಾದಕ್ಕೆ ಅಂತ್ಯ ಹಾಡಲು ಮುಂದಾಗುವ ಮೂಲಕ ಮೋದಿ ತನ್ನ ಆಡಳಿತ ಅಜೆಂಡಾವನ್ನು ಮರುರೂಪಿಸಲು ಸಜ್ಜಾಗಿದ್ದಾರೆ.

ಶಾ ಜನವರಿ ಅಥವಾ ಫೆಬ್ರವರಿಯಲ್ಲಿ ಬಿಜೆಪಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಮತ್ತು ಚುಕ್ಕಾಣಿಯನ್ನು ತನ್ನ ನಿಷ್ಠಾವಂತರಿಗೆ ಒಪ್ಪಿಸಲಿದ್ದಾರೆ. ಆದರೆ ಗಾಂಧಿ ಕುಟುಂಬದಂತೆ ಪಕ್ಷದ ಮೇಲೆ ತನ್ನ ಹಿಡಿತವನ್ನು ಅವರು ಮುಂದುವರಿಸಲಿದ್ದಾರೆ.

ಮುಂದಿನ ವಾರಗಳು, ತಿಂಗಳುಗಳಲ್ಲಿ ಎನ್‌ಆರ್‌ಸಿ ಶಾ ಅವರ ಮನಸ್ಸನ್ನು ಆಕ್ರಮಿಸಿಕೊಳ್ಳಲಿದೆ. ಬಿಜೆಪಿಯು ದೇಶಾದ್ಯಂತ ಎನ್‌ಆರ್‌ಸಿ ಜಾರಿ ಕುರಿತು ಶಾ ಅವರ ಹೇಳಿಕೆಯನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಅಳಿಸಿದೆ. ಮೋದಿ ಕೂಡ ಎನ್‌ಆರ್‌ಸಿಯಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ. ಆದರೆ ಶಾ ಅವರು ಕೇಂದ್ರ ಗೃಹಸಚಿವರಾಗಿ ತನ್ನ ದಾಖಲೆಯನ್ನು ತಿರುಚಲು ತನ್ನ ವಿರೋಧಿಗಳಿಗೆ ಅವಕಾಶ ನೀಡುತ್ತಾರೆ ಎಂದು ಯಾರೂ ನಿರೀಕ್ಷಿಸಬೇಕಿಲ್ಲ. ಅವರು ತನ್ನ ಸಮಯಕ್ಕಾಗಿ ಖಂಡಿತ ಕಾಯುತ್ತಾರೆ.

ತನ್ಮಧ್ಯೆ ಮೋದಿಯವರ ಸಂಭಾವ್ಯ ಉತ್ತರಾಧಿಕಾರಿಯಾಗಿ ಶಾ ತನ್ನನ್ನು ಜನನಾಯಕನೆಂದು ಸಾಬೀತುಗೊಳಿಸುವ ಉದ್ದೇಶ ಹೊಂದಿರುವಂತಿದೆ. ಕಳೆದ ಲೋಕಸಭಾ ಮತ್ತು ನಂತರದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಅವರು ಮೋದಿಯವರಿಗಿಂತ ಹೆಚ್ಚಿನ ರ್ಯಾಲಿಗಳನ್ನು ನಡೆಸಿದ್ದಾರೆ. ಶಾ ಅವರು ಮೋದಿಯಂತೆ ವ್ಯಕ್ತಿತ್ವ ಆರಾಧಕರನ್ನು ಹೊಂದಿಲ್ಲದಿರಬಹುದು, ಆದರೆ 18 ವರ್ಷಗಳ ಹಿಂದೆ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಅವರು ಬೆರಳೆಣಿಕೆಯಷ್ಟೂ ವ್ತಕ್ತಿತ್ವ ಆರಾಧಕರನ್ನು ಹೊಂದಿರಲಿಲ್ಲ ಎಂದು ವರದಿ ಬೆಟ್ಟು ಮಾಡಿದೆ.

Writer - ಕೃಪೆ: ‘ದಿ ಪ್ರಿಂಟ್’

contributor

Editor - ಕೃಪೆ: ‘ದಿ ಪ್ರಿಂಟ್’

contributor

Similar News