ಮೇರಿಕೋಮ್, ಝರೀನ್ ಫೈನಲ್‌ಗೆ

Update: 2019-12-28 05:45 GMT

ಹೊಸದಿಲ್ಲಿ,ಡಿ.27: ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಗೇಮ್ ್ಸನ ಮಹಿಳಾ ಬಾಕ್ಸಿಂಗ್ ಟ್ರಯಲ್ಸ್ ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ 51 ಕೆಜಿ ತೂಕ ವಿಭಾಗದಲ್ಲಿ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯ ಚಾಂಪಿಯನ್ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿಯನ್ ಝರೀನ್ ಅವರು ಯೂತ್ ವರ್ಲ್ಡ್‌ಚಾಂಪಿಯನ್ ಜ್ಯೋತಿ ಗುಲಿಯಾರನ್ನು ಒಮ್ಮತದ ತೀರ್ಪಿನಲ್ಲಿ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಹಲವು ಬಾರಿ ಏಶ್ಯನ್ ಚಾಂಪಿಯನ್‌ಪಟ್ಟಕ್ಕೇರಿರುವ ಮೇರಿ ಕೋಮ್ ಅವರು ರಿತು ಗ್ರೆವಾಲ್‌ರನ್ನು ಒಮ್ಮತದ ತೀರ್ಪಿನಲ್ಲಿ ಸೋಲಿಸಿದರು. ಎರಡು ದಿನಗಳ ಸ್ಪರ್ಧೆಯು ಶನಿವಾರ ಫೈನಲ್ ಪಂದ್ಯ ನಡೆಯುವ ಮೂಲಕ ಕೊನೆಗೊಳ್ಳಲಿದೆ. ಭಾರತದ ಬಾಕ್ಸಿಂಗ್ ಒಕ್ಕೂಟ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಆಯ್ಕೆ ನೀತಿಗೆ ಸಂಬಂಧಿಸಿ ವಿರುದ್ಧ ನಿಲುವು ತಾಳಿದಾಗ ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ವಿರುದ್ಧ ಟ್ರಯಲ್ ನಡೆಸುವಂತೆ ಬೇಡಿಕೆ ಇಡುವ ಮುಖಾಂತರ ಝರೀನ್ ಸುದ್ದಿಯಾಗಿದ್ದರು. ಬಾಕ್ಸಿಂಗ್ ಒಕ್ಕೂಟದ ಆಯ್ಕೆ ನೀತಿಯನ್ನು ನಾನು ಗೌರವಿಸುತ್ತೇನೆ ಎಂದು ಮೇರಿ ಕೋಮ್ ಪ್ರತಿಕ್ರಿಯಿಸಿದ್ದರು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮೇರಿಕೋಮ್‌ರನ್ನು ಟ್ರಯಲ್ಸ್ ಇಲ್ಲದೆಯೇ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಆಯ್ಕೆ ಮಾಡಲಾಗುವುದು ಎಂದು ಸನ್ಮಾನ ಕಾರ್ಯಕ್ರಮವೊಂದರಲ್ಲಿ ಘೋಷಿಸುವ ಮೂಲಕ ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ವಿವಾದದ ಬಿರುಗಾಳಿ ಎಬ್ಬಿಸಿದ್ದರು. ರಾಜ್ಯಸಭಾ ಸದಸ್ಯೆಯೂ ಆಗಿರುವ ಮಣಿಪುರದ ಮೇರಿ ಕೋಮ್ ವಿರುದ್ಧ ತನಗೆ ನ್ಯಾಯಬೇಕು ಎಂದು ಝರೀನಾ ಹಠ ಹಿಡಿದಿದ್ದರು. ತಮ್ಮ ಹಠ ಸಾಧಿಸುವಲ್ಲಿಯೂ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News