ಪ್ರಾಮಾಣಿಕತೆಯ ಮಾರ್ಗವು ಯಾತನಾದಾಯಕ: ಸರಕಾರಿ ಏಜೆನ್ಸಿಗಳ ತನಿಖೆ ಬಗ್ಗೆ ಅಶೋಕ್ ಲಾವಸ

Update: 2019-12-28 15:33 GMT

ಹೊಸದಿಲ್ಲಿ, ಡಿ.28: ಸರಕಾರಿ ಏಜೆನ್ಸಿಗಳಿಂದ ನಿರಂತರ ತನಿಖೆ ಎದುರಿಸುತ್ತಿರುವ ಚುನಾವಣಾ ಆಯುಕ್ತ ಅಶೋಕ್ ಲಾವಸ ಅವರು, ಪ್ರಾಮಾಣಿಕತೆಯ ಮಾರ್ಗವು ಯಾತನಾದಾಯಕವಾಗಿದೆ. ಹೆಚ್ಚಿನ ಶಕ್ತಿಯನ್ನು ಕಬಳಿಸುತ್ತದೆ ಎಂದು ಹೇಳಿದ್ದಾರೆ.

indianexpress.comನಲ್ಲಿ ಬರೆದಿರುವ ಲೇಖನದಲ್ಲಿ ಲಾವಸ, “ಪ್ರಾಮಾಣಿಕತೆಯು ಸರಳ ನೀತಿಯಲ್ಲ, ಆ ಮಾರ್ಗದಲ್ಲಿ ಸಾಗುವವರು ಸದಾ ಬೆಲೆಯನ್ನು ತೆರುತ್ತಲೇ ಇರಬೇಕಾಗುತ್ತದೆ” ಎಂದಿದ್ದಾರೆ. ಲಾವಸ ಹಾಲಿ ಚುನಾವಣಾ ಆಯುಕ್ತ ಸುನಿಲ್ ಅರೋರಾರ ನಿವೃತ್ತಿಯ ಬಳಿಕ ಅವರ ಸ್ಥಾನಕ್ಕೇರುವ ಸಾಲಿನಲ್ಲಿದ್ದಾರೆ.

ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪಗಳ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಚುನಾವಣಾ ಆಯೋಗವು ಕ್ಲೀನ್ ಚಿಟ್ ನೀಡಿದ್ದನ್ನು ವಿರೋಧಿಸಿದಾಗಿನಿಂದ ತೆರಿಗೆ ವಂಚನೆ ಆರೋಪಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳು ಲಾವಸ ಅವರ ಬೆನ್ನ ಹಿಂದೆ ಬಿದ್ದಿದೆ.

"ಪ್ರಾಮಾಣಿಕರು ದೈಹಿಕವಾಗಿ ಸದೃಢ ಅಥವಾ ಶಕ್ತಿಶಾಲಿಯಲ್ಲದಿರಬಹುದು. ಆದರೆ ಅವರು ಧೈರ್ಯವನ್ನು ಹೊಂದಿರುತ್ತಾರೆ ಮತ್ತು ಆ ಧೈರ್ಯವೇ ಅವರ ಶಕ್ತಿಯಾಗಿರುತ್ತದೆ. ಅವರ ದುಃಖದ ಸಮಯದಲ್ಲಿ ಅವರಿಗೆ ಅಗತ್ಯವಿದ್ದಾಗ ಅಥವಾ ಅವರನ್ನು ಪ್ರತ್ಯೇಕತೆ ಕಾಡುತ್ತಿರುವಾಗ ಅವರ ಜೊತೆ ನಿಲ್ಲದವರು ಧೈರ್ಯಶಾಲಿಗಳಲ್ಲದಿರಬಹುದು. ಅವರು ನಾಟಕವೊಂದು ಮುಗಿದಾಗ ಎದ್ದು ನಿಂತು ಚಪ್ಪಾಳೆ ಬಾರಿಸುವ ಪ್ರೇಕ್ಷಕರಿದ್ದಂತೆ. ಅವರು ನಾಯಕನೊಂದಿಗೆ ಅನುಭೂತಿ ಹೊಂದಿದ್ದರೂ ಅವರು ನಾಟಕದಲ್ಲಿ ಭಾಗವಹಿಸಿರುವುದಿಲ್ಲ. ನಾಯಕನು ಕಷ್ಟಪಡುವುದನ್ನು ಅವರು ನೋಡಬಹುದು, ಆತನ ಸಂಕಷ್ಟಕ್ಕಾಗಿ ಹನಿ ಕಣ್ಣೀರನ್ನು ಸುರಿಸಬಹುದು, ಆತನಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಬಹುದು ಮತ್ತು ಆತನನ್ನು ಶ್ಲಾಘಿಸುವ ಮುನ್ನ ನಾಟಕದ ಅಂತ್ಯಕ್ಕಾಗಿ ಕಾಯಬಹುದು" ಎಂದು ಲಾವಸ ತಾನು ಮತ್ತು ತನ್ನ ಕುಟುಂಬ ಎದುರಿಸುತ್ತಿರುವ ಅಗ್ನಿಪರೀಕ್ಷೆಗಳನ್ನು ಪ್ರಸ್ತಾಪಿಸಿ ಬರೆದಿದ್ದಾರೆ.

ಲೋಕಸಭಾ ಚುನಾವಣೆಗಳ ಸಂದರ್ಭ ನೀತಿ ಸಂಹಿತೆ ಆರೋಪಗಳಲ್ಲಿ ಮೋದಿ ಮತ್ತು ಶಾ ಅವರಿಗೆ ಕ್ಲೀನ್ ಚಿಟ್ ನೀಡುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಲಾವಸ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು ವರದಿಯಾಗಿತ್ತು. ತನ್ನ ಭಿನ್ನಾಭಿಪ್ರಾಯಗಳನ್ನು ಚುನಾವಣಾ ಆಯೋಗವು ದಾಖಲಿಸಿಕೊಂಡಿರಲಿಲ್ಲ ಎಂದು ಆಗ ಲಾವಸ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಯ ತೆರಿಗೆ ಇಲಾಖೆ ಮತ್ತು ಮೋದಿ ಸರಕಾರ ಶಂಕಿತ ತೆರಿಗೆ ವಂಚನೆ ಮತ್ತು ಅಧಿಕಾರ ದುರುಪಯೋಗಕ್ಕಾಗಿ ಲಾವಸ ಮತ್ತು ಅವರ ಕುಟುಂಬದ ವಿರುದ್ಧ ಹಲವಾರು ವಿಚಾರಣೆಗಳನ್ನು ಆರಂಭಿಸಿದ್ದು, ಆಗಿನಿಂದಲೂ ಅವರು ವಿವಾದಗಳ ಕೇಂದ್ರಬಿಂದುವಾಗಿದ್ದಾರೆ.

ಜೀವನದಲ್ಲಿ ಪ್ರತಿಯೊಂದಕ್ಕೂ ಬೆಲೆಯಿರುವಂತೆ ಪ್ರಾಮಾಣಿಕತೆಗೂ ಬೆಲೆಯಿದೆ. ನೇರವಾಗಿ ಅಥವಾ ಪರೋಕ್ಷವಾಗಿ ಆ ಬೆಲೆಯನ್ನು ತೆರಲು ಸಿದ್ಧರಾಗಿರುವುದು ಪ್ರಾಮಾಣಿಕ ಕೃತ್ಯದ ಭಾಗವಾಗಿದೆ ಎಂದು ಬರೆದಿರುವ ಲಾವಸ, ಪ್ರಾಮಾಣಿಕರಿಂದ ವಿರೋಧಿಸಲ್ಪಟ್ಟಿರುವವರು ವಿನಮ್ರತೆಯ ಶ್ರೇಷ್ಠತೆಯನ್ನು ಸೌಮ್ಯವಾಗಿ ಒಪ್ಪಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಮುಗ್ಧತನವಾಗುತ್ತದೆ. ಅವರು ಪ್ರತಿದಾಳಿ ನಡೆಸುತ್ತಾರೆ ಮತ್ತು ಪ್ರಾಮಾಣಿಕರು ಏಕಾಂಗಿಯಾಗಿ ನರಳುವ ಮೂಲಕ ಅದಕ್ಕೆ ಬೆಲೆಯನ್ನು ತೆರಬೇಕಾಗುತ್ತದೆ ಎಂದೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News