ಡಿ.30ರಂದು ಬಿಬಿಎಂಪಿ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ

Update: 2019-12-28 16:52 GMT

ಬೆಂಗಳೂರು, ಡಿ.28: ಬಿಬಿಎಂಪಿ 12 ಸ್ಥಾಯಿ ಸಮಿತಿ ಚುನಾವಣೆ ಡಿ.30ರಂದು ನಡೆಯಲಿದ್ದು, ಸಮಿತಿಗಳಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಗಳು ತಮ್ಮ ನಾಯಕರುಗಳ ಮೂಲಕ ಒತ್ತಡ ಹೇರುತ್ತಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಸದಸ್ಯರು ಅಂದು ಬೆಳಗ್ಗೆ 8 ಗಂಟೆಯಿಂದ 9.30 ರವರೆಗೆ ಬಿಬಿಎಂಪಿ ಪೌರಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಿಗೆ ನಾಮಪತ್ರ ಸಲ್ಲಿಸಬಹುದು. ನಂತರ ಸದಸ್ಯರ ಹಾಜರಾತಿ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ. ನಂತರ 11.30 ಅಗತ್ಯವಿದ್ದಲ್ಲಿ ಚುನಾವಣೆ ನಡೆಸಿ ಫಲಿತಾಂಶ ಪ್ರಕಟ ಮಾಡಲಾಗುವ ಪ್ರಕ್ರಿಯೆ ನಡೆಯಲಿದೆ.

ಮುಂದೂಡಿಕೆಯಾಗಿದ್ದ ಚುನಾವಣೆ: ಮೆಯರ್ ಹಾಗೂ ಉಪಮೆಯರ್ ಚುನಾವಣೆ ನಡೆದ ಅ.1 ರಂದು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆಯಬೇಕಿತ್ತು. ಆದರೆ, ಹಿಂದಿನ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳದ ಕಾರಣ ಮುಂದೂಡಲಾಗಿತ್ತು. ನಂತರ ಡಿ.4 ರಂದು ಚುನಾವಣೆ ಘೊಷಣೆ ಮಾಡಿದ್ದರೂ, ವಿಧಾನಸಭೆ ಉಪ ಚುನಾವಣೆ ಪ್ರಚಾರದ ಹಿನ್ನೆಲೆ ಯಾವೊಬ್ಬ ಸದಸ್ಯ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಮುಂದೂಡಲಾಗಿತ್ತು.

ಕೇವಲ 8 ತಿಂಗಳ ಅಧಿಕಾರ: ಬಿಬಿಎಂಪಿ ಪಾಲಿಕೆ ಸದಸ್ಯರ ಐದು ವರ್ಷಗಳ ಆಯ್ಕೆ ಅವಧಿ ಬರುವ ಸೆ.28 ಕ್ಕೆ ಮುಕ್ತಾಯವಾಗಲಿದೆ. ಅಂದೇ ಸ್ಥಾಯಿ ಸಮಿತಿ ಅಧಿಕಾರವೂ ಅಂತ್ಯಗೊಳ್ಳಲಿದೆ. ಕಳೆದ ಸ್ಥಾಯಿ ಸಮಿತಿ ಸದಸ್ಯರು ಒಂದು ವರ್ಷ ಅಧಿಕಾರ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿ ಚುನಾವಣೆ ಮುಂದೂಡಿದ್ದರು. ಇದೀಗ ಹೊಸದಾಗಿ ಆಯ್ಕೆಯಾಗುವ ಸ್ಥಾಯಿ ಸಮಿತಿಯ ಅಧಿಕಾರಾವಧಿ ಕೇವಲ 8 ತಿಂಗಳಷ್ಟೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News