'ಭಾರತ್ ಮಾತಾ ಕೀ ಜೈ' ಎಂದು ಹೇಳುವವರು ಮಾತ್ರ ದೇಶದಲ್ಲಿ ಉಳಿಯಬಹುದು: ಕೇಂದ್ರ ಸಚಿವ ಪ್ರಧಾನ್

Update: 2019-12-29 18:01 GMT

ಹೊಸದಿಲ್ಲಿ, ಡಿ. 29: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಹೋರಾಟ ನಡೆಯುತ್ತಿರುವ ನಡುವೆ ಶನಿವಾರ ಕೇಂದ್ರದ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಲು ಸಿದ್ಧರಿರುವವರಿಗೆ ಮಾತ್ರ ಭಾರತದಲ್ಲಿ ಜೀವಿಸಲು ಅವಕಾಶ ನೀಡಬೇಕು ಎಂದಿದ್ದಾರೆ.

ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ 54ನೇ ರಾಜ್ಯ ಸಮಾವೇಶದಲ್ಲಿ ಧರ್ಮೇಂದ್ರ ಪ್ರಧಾನ್ ಮಾತನಾಡಿದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯದ ಬಿರುಗಾಳಿಯೇ ಎದ್ದಿದೆ.

‘‘ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಲಿದಾನ ವ್ಯರ್ಥವಾಗಲಿದೆಯೇ? ನಮ್ಮ ದೇಶದ ಸ್ವಾತಂತ್ರಕ್ಕಾಗಿ ಕೋಟಿಗಟ್ಟಲೆ ಜನರು ಹೋರಾಟ ನಡೆಸಿದರು. 70 ವರ್ಷಗಳ ಬಳಿಕ ಈ ದೇಶದ ಪೌರತ್ವವನ್ನು ಲೆಕ್ಕ ಮಾಡುವ ಕುರಿತು ನಮಗೆ ಚರ್ಚೆ ನಡೆಸಲು ಕೂಡ ಸಾಧ್ಯವಾಗಬಾರದು ಎಂದು ಅವರು ನಮಗೆ ಸ್ವಾತಂತ್ರ ದೊರಕಿಸಿಕೊಟ್ಟರೇ? ನಾವು ಈ ದೇಶವನ್ನು ಧರ್ಮಶಾಲೆಯಾಗಲು ಬಿಡಬೇಕೇ ?’’ ಎಂದು ಅವರು ಪ್ರಶ್ನಿಸಿದ್ದಾರೆ.

‘‘ಭಾರತದಲ್ಲಿ ಪ್ರತಿಯೊಬ್ಬರು ಭಾರತ್ ಮಾತಾ ಕಿ ಜೈ ಎಂದು ಹೇಳಬೇಕಾಗಿದೆ. ಅಂತವರಿಗೆ ಮಾತ್ರ ಈ ದೇಶದಲ್ಲಿ ಜೀವಿಸುವ ಹಕ್ಕು ಇದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News