ಕಾಶ್ಮೀರ ವಿವಾದ: ಒಐಸಿ ವಿದೇಶಾಂಗ ಸಚಿವರ ಸಭೆ ಕರೆಯಲು ಸೌದಿ ಚಿಂತನೆ

Update: 2019-12-29 17:26 GMT

ಇಸ್ಲಾಮಾಬಾದ್, ಡಿ.29: ಕಾಶ್ಮೀರದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ)ಯ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯನ್ನು ನಡೆಸುವ ಚಿಂತನೆಯನ್ನು ಸೌದಿ ಅರೇಬಿಯ ಹೊಂದಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.

ಕಾಶ್ಮೀರದ ವಿವಾದದ ಕುರಿತ ಚರ್ಚೆಯು ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿರುವುದು ಎಂದು ಅದು ಹೇಳಿದೆ.

ಗುರುವಾರ ವಿದೇಶಾಂಗ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೌದಿ ವಿದೇಶಾಂಗ ಸಚಿವ ಯುವರಾಜ ಫೈಝಲ್ ಬಿನ್ ಫಹಾನ್ ಅವರು ತನ್ನ ಪಾಕ್ ಸಹವರ್ತಿ ಶಾ ಮೆಹಮೂದ್ ಖುರೈಶಿ ಅವರಿಗೆ ಈ ವಿಷಯವನ್ನು ತಿಳಿಸಿದ್ದಾರೆಂದು ರಾಜತಾಂತ್ರಿಕ ಮೂಲವೊಂದನ್ನು ಉಲ್ಲೇಖಿಸಿ ಡಾನ್ ಸುದ್ದಿಜಾಲ ತಾಣ ವರದಿ ಮಾಡಿದೆ.

 ಸೌದಿ ಅರೇಬಿಯದ ಪ್ರಬಲ ಆಕ್ಷೇಪದ ನಡುವೆ ಇತ್ತೀಚೆಗೆ ಕೌಲಾಲಂಪುರದಲ್ಲಿ ಮಲೇಶ್ಯ ಸರಕಾರ ಆಯೋಜಿಸಿದ ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಕಿಸ್ತಾನವು ಪಾಲ್ಗೊಳ್ಳದೆ ಇದ್ದುದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಲು ಸೌದಿಯ ಯುವರಾಜ ಫೈಝಲ್ ಇಸ್ಲಾಮಾಬಾದ್‌ಗೆ ಇಂದು ಆಗಮಿಸಿದ್ದರು.

ಕೌಲಾಲಂಪುರ ಶೃಂಗಸಭೆಯು ಮುಸ್ಲಿಂ ರಾಷ್ಟ್ರಗಳ ನಡುವೆ ಒಡಕು ಉಂಟು ಮಾಡುವ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತಪಡಿಸಿ ಯುಎಇ ಹಾಗೂ ಸೌದಿ ಆರೇಬಿಯ ಶೃಂಗಸಭೆಯಿಂದ ದೂರಸರಿದಿದಿದ್ದವು.

ಕಾಶ್ಮೀರ ವಿವಾದದಲ್ಲಿ ಒಐಸಿ ಯಾವ ರೀತಿಯ ಪಾತ್ರ ವಹಿಸಬಹುದೆಂಬ ಬಗ್ಗೆಯೂ ಉಭಯ ವಿದೇಶಾಂಗ ಸಚಿವರು ಚರ್ಚಿಸಿದರೆಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾದ ಒಐಸಿ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ ಸಿ ಇತ್ಯಾದಿ ಭಾರತದಲ್ಲಿ ಮುಸ್ಲಿಮರ ಮೇಲೆ ಪರಿಣಾಮ ಬೀರುವ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿಯೂ ಇತ್ತೀಚೆಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News