ಚಳಿಗಾಳಿ, ದಟ್ಟ ಮಂಜಿನಿಂದ ತತ್ತರಿಸಿದ ರಾಷ್ಟ್ರ ರಾಜಧಾನಿ: 'ರೆಡ್ ಅಲರ್ಟ್' ಘೋಷಣೆ

Update: 2019-12-30 04:28 GMT

ಹೊಸದಿಲ್ಲಿ: ಚಳಿಗಾಳಿ ಹಾಗೂ ದಟ್ಟ ಮಂಜಿನಿಂದ ತತ್ತರಿಸಿರುವ ರಾಜಧಾನಿ ಮತ್ತು ಸುತ್ತಮುತ್ತಲ ನಗರಗಳಲ್ಲಿ ಸೋಮವಾರ ಬೆಳಗ್ಗೆ ದಟ್ಟ ಮಂಜು ಕವಿದ ಕಾರಣದಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರೈಲು ಹಾಗೂ ವಿಮಾನ ಸೇವೆಗೂ ಧಕ್ಕೆ ಉಂಟಾಗಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ವಿಮಾನಗಳ ಪ್ರಯಾಣಿಕರಿಗೆ ಈ ಬಗ್ಗೆ ಆಯಾ ವಿಮಾನಯಾನ ಸಂಸ್ಥೆಗಳು ಸೂಚನೆಗಳನ್ನು ರವಾನಿಸಿವೆ.

ಕನಿಷ್ಠ 30 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ದಟ್ಟ ಮಂಜಿನಿಂದಾಗಿ ಮುಖ್ಯರಸ್ತೆಗಳಲ್ಲೇ ದೃಶ್ಯತೆ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ದೆಹಲಿ ಹಾಗೂ ನೋಯ್ಡಾವನ್ನು ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ದಟ್ಟ ಮಂಜಿನಿಂದಾಗಿ ಸಂಚಾರಕ್ಕೆ ತಡೆ ಉಂಟಾಗಿದೆ. 

ದೆಹಲಿ ವಿಮಾನ ನಿಲ್ದಾಣದಲ್ಲಿ ಕ್ಯಾಟ್ 3ಬಿ ವ್ಯವಸ್ಥೆ ಹೊಂದಿರುವ ವಿಮಾನಗಳು ಮಾತ್ರ ಇನ್‍ಸ್ಟ್ರುಮೆಂಟ್ ಲ್ಯಾಂಡಿಂಗ್ ಸೌಲಭ್ಯದೊಂದಿಗೆ ಇಳಿಯುತ್ತಿವೆ. ವಿಮಾನ ಸಂಚಾರದ ಪರಿಷ್ಕೃತ ಮಾಹಿತಿಗಾಗಿ ನಿರಂತರ ಸಂಪರ್ಕದಲ್ಲಿರುವಂತೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿವೆ. ಇದುವರೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಮೂರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಇನ್ನೂ ಎರಡು ದಿನ ಉತ್ತರ ಭಾರತದಾದ್ಯಂತ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಲೋಧಿ ರಸ್ತೆ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 2.8 ಡಿಗ್ರಿ ದಾಖಲಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಅಧಿಕಾರಿಗಳು ರಾಷ್ಟ್ರರಾಜಧಾನಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ. ಸಪ್ಧರ್‍ಜಂಗ್ ವೀಕ್ಷಣಾಲಯದಲ್ಲಿ ದಶಕದಲ್ಲೇ ಕನಿಷ್ಠ ಅಂದರೆ 2.4 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. 

ರಾಜಧಾನಿಯಲ್ಲಿ ಗರಿಷ್ಠ ತಾಪಮಾನದ ಮಾಸಿಕ ಸರಾಸರಿ 19.15 ಡಿಗ್ರಿ ಆಗಿದ್ದು, 1997ರಲ್ಲಿ ದಾಖಲಾದ 17.3 ಡಿಗ್ರಿಯನ್ನು ಹೊರತುಪಡಿಸಿದರೆ, 1901ರ ಬಳಿಕ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದಾಗಿದೆ. 1919, 1929, 1961 ಮತ್ತು 1997ರಲ್ಲಿ ಮಾತ್ರ ಸರಾಸರಿ ಗರಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಯಾದ ದಾಖಲೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News