ರಾಜ್ಯ ರಾಜಧಾನಿಯಲ್ಲಿ 3500ಕ್ಕೂ ಅಧಿಕ ಮರಗಳ ಕಡಿತಕ್ಕೆ ಸಿದ್ಧತೆ !

Update: 2019-12-30 13:59 GMT

ಬೆಂಗಳೂರು, ಡಿ.30: ನಮ್ಮ ಮೆಟ್ರೋ, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ನಗರದಲ್ಲಿ 3500 ಕ್ಕೂ ಅಧಿಕ ಮರಗಳನ್ನು ಕಡಿಯಲು ಸಿದ್ಧತೆ ನಡೆಸಲಾಗಿದೆ.

ನಗರದಲ್ಲಿ ಇದುವರೆಗೂ 18 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಅದರ ಜತೆಗೆ ಇನ್ನಷ್ಟು ಮರಗಳನ್ನು ಕಡಿಯಲು ಮುಂದಾಗಿದ್ದು, ಇದರ ಪರಿಣಾಮ ಪರಿಸರ ಸಮತೋಲನ ಮತ್ತಷ್ಟು ಏರುಪೇರಾಗುವ ಸಾಧ್ಯತೆಯಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ನೂರಾರು ಮರಗಳನ್ನು ಕಡಿಯಲಾಗುತ್ತದೆ. 2008-09 ರಿಂದ 2016-17 ರವರೆಗೆ ವಿವಿಧ ಕಾರಣಗಳಿಂದ ಸಾವಿರಾರು ಮರಗಳನ್ನು ಬುಡಸಮೇತ ಕಿತ್ತು ಹಾಕಲಾಗಿದೆ. ಜತೆಗೆ, 35,200 ಮರಗಳ ಕೊಂಬೆಗಳನ್ನು ಕಡಿಯಲಾಗಿದೆ. ಇದೀಗ ಮತ್ತಷ್ಟು ವೃಕ್ಷಗಳನ್ನು ಕಡಿದು ಹಾಕುವ ಯೋಜನೆ ಸಿದ್ಧವಾಗಿದ್ದು, ರಸ್ತೆ ವಿಸ್ತರಣೆ, ಮೆಟ್ರೋ ಕಾಮಗಾರಿ, ಹೊಸ ರಸ್ತೆ ನಿರ್ಮಾಣಕ್ಕಾಗಿ ಐದು ಕಡೆಗಳಲ್ಲಿ 3500 ಮರಗಳನ್ನು ಕಡಿಯಲು ತೀರ್ಮಾನಿಸಲಾಗಿದೆ.

ತಜ್ಞರ ಸಮಿತಿಯಿಂದ ಪರಿಶೀಲನೆ: ಈಗಾಗಲೇ ಕಡಿಯಲು ಗುರುತಿಸಿರುವ ಮರಗಳಲ್ಲಿ ಕೆಲವನ್ನು ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಸರಕಾರ ನೇಮಕ ಮಾಡಿರುವ ಮರಗಳ ತಜ್ಞರ ಸಮಿತಿಯ ಸದಸ್ಯರು ಮರಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನೆ ವೇಳೆ ಮರಗಳ ಸದೃಢತೆಯನ್ನು ಪರೀಕ್ಷಿಸಲಾಗುವುದು.

ಅನಂತರ ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮರಗಳ ಸ್ಥಳಾಂತರ ಸಾಧ್ಯ ಎನ್ನುವುದಾದರೆ ಅವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಬಿಬಿಎಂಪಿ ಅಥವಾ ಯೋಜನೆ ಜಾರಿ ಮಾಡುವ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News