×
Ad

ಪ್ರಚಾರಕ್ಕೆ ಸೀಮಿತವಾದ 6 ಗಂಟೆಗೆ ಹಾಜರಿ ಸುತ್ತೋಲೆ ?

Update: 2019-12-30 19:44 IST

ಬೆಂಗಳೂರು, ಡಿ.30: ನಗರದ ವಾರ್ಡ್‌ಗಳಲ್ಲಿನ ಪ್ರಾಥಮಿಕ ಹಂತದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಬೆಳಗ್ಗೆ 6ರ ವೇಳೆಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪಾಲಿಕೆ ಆಯುಕ್ತರು ಹೊರಡಿಸಿದ್ದ ಸುತ್ತೋಲೆ ಪ್ರಚಾರಕ್ಕೆ ಸೀಮಿತವಾಗಿದೆ ಎಂಬ ದೂರು ಕೇಳಿಬಂದಿದೆ.

ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯದ ವಿವಿಧ ವಿಭಾಗದ ಅಧಿಕಾರಿಗಳು ಕಡ್ಡಾಯವಾಗಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಹೆಚ್ಚುವರಿ ಕೆಲಸ ಮಾಡಬೇಕು ಎಂದು ನ.18ರಂದು ಆಯುಕ್ತರು ಆದೇಶ ಹೊರಡಿಸಿದ್ದರು. ಇದಾಗಿ ಒಂದೂವರೆ ತಿಂಗಳಾದರೂ ಅಧಿಕಾರಿಗಳು ಫೀಲ್ಡ್‌ಗೆ ಇಳಿಯುತ್ತಿಲ್ಲ. ಈ ಬಗ್ಗೆ ಖುದ್ದು ಪಾಲಿಕೆಯ ಹಿರಿಯ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ವಾರ್ಡ್‌ನ ಇಂಜಿನಿಯರ್, ಕಿರಿಯ ಮತ್ತು ಹಿರಿಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಕೀಯ ಅಧಿಕಾರಿಗಳು ಸೇರಿದಂತೆ ವಾರ್ಡ್ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಗೆ ಕೆಲಕ್ಕೆ ಹಾಜರಾಗಬೇಕು. ಅಧಿಕಾರಿಗಳ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿರುವ ತ್ಯಾಜ್ಯಗಳ (ಬ್ಲಾಕ್‌ಸ್ಪಾಟ್‌ಗಳ) ತೆರವು, ಹಸಿ ಮತ್ತು ಒಣ ಕಸ ಕಡ್ಡಾಯ ವಿಂಗಡಣೆ, ಪೌರಕಾರ್ಮಿಕರ ಸಮಸ್ಯೆಗಳು, ಗುತ್ತಿಗೆದಾರರು ಸರ್ಮಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆಯೇ ಇಲ್ಲವೇ ಎನ್ನುವುದು ಪರಿಶೀಲನೆ ಮಾಡುವುದು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ದುರಸ್ತಿ ಕಾರ್ಯ ಪರಿಶೀಲಿಸಬೇಕು.

ವಾರ್ಡ್ ವ್ಯಾಪ್ತಿಯಲ್ಲಿನ ಕಾಮಗಾರಿ ಪರಿಶೀಲನೆ, ರಸ್ತೆ ವಿಭಜಕಗಳ ಭಾಗದಲ್ಲಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದು. ಉದ್ಯಾನವನಗಳ ನಿರ್ವಹಣೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡವರ ವಿವರ ಸಂಗ್ರಹ ಮಾಡುವುದರ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಆದ್ಯತೆ ನೀಡುವಂತೆ ಆಯುಕ್ತರು ಸೂಚನೆ ನೀಡಿದ್ದರು. ಆದರೆ, ನೀಡಿದ್ದ ಸೂಚನೆಗಳಲ್ಲಿ ಬಹುತೇಕ ವಿಷಯಗಳು ಸರ್ಮಪಕವಾಗಿ ಪಾಲನೆಯಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News