ಜಂಟಿ ಕಾರ್ಯಯೋಜನೆ ಮೂಲಕ ಶಾಲೆಗಳ ಆರಂಭ ಅಗತ್ಯ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-12-31 17:32 GMT

ಬೆಂಗಳೂರು, ಡಿ.31: ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ಶಾಸಕರ ಭವನದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ)ದ ವತಿಯಿಂದ ಆಯೋಜಿಸಿದ್ದ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಸಾಧಕ-ಬಾಧಕಗಳ ಕುರಿತ ಸಮಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳು ಅತಂತ್ರ ಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಇದರಿಂದ ಅಂಗನವಾಡಿಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರ ಬದುಕು ಬೀದಿಪಾಲಾಗಲಿದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2013 ರಲ್ಲಿ ಬಿಡುಗಡೆ ಮಾಡಿದ ಸುತ್ತೋಲೆ ಹಾಗೂ 2019 ರಲ್ಲಿ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಸುತ್ತೋಲೆಗೂ ಸಾಕಷ್ಟು ಸಾಮ್ಯತೆಯಿದೆ. ಎರಡೂ ಕಡೆಗಳಲ್ಲಿ ಅತಿಥಿ ಶಿಕ್ಷಕರು ಇರುತ್ತಾರೆ, ಬಿಸಿಯೂಟ ನೀಡಬೇಕು ಸೇರಿದಂತೆ ಹಲವು ಅಂಶಗಳು ಸಮಾನವಾಗಿವೆ ಎಂದು ಅವರು ಮಾಹಿತಿ ನೀಡಿದರು.

ಸರಕಾರಿ ಶಾಲೆಗಳನ್ನು ಉಳಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎನ್ನುತ್ತಾರೆ. ಆದರೆ, ಒಂದು ಯೋಜನೆಯನ್ನು ಉಳಿಸುವ ಉದ್ದೇಶದಿಂದ, ಮತ್ತೊಂದು ಯೋಜನೆಯನ್ನು ನುಂಗಿ ಹಾಕುತ್ತಿದೆ. ಆದುದರಿಂದಾಗಿ, ಸರಕಾರವೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು. ಅದಕ್ಕಾಗಿ, ಮತ್ತೊಂದು ಯೋಜನೆಯನ್ನು ಬಲಿಕೊಡಬಾರದು ಎಂದರು.

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಪೂರ್ವ ಪ್ರಾಥಮಿಕ ಶಾಲೆಗಳ ಅಗತ್ಯತೆ ಬಗ್ಗೆ ಅಂದಿನ ಸರಕಾರಕ್ಕೆ ವರದಿ ಸಲ್ಲಿಸಿದ್ದೆ. ಅಂದು ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅಂಗನವಾಡಿಗಳಲ್ಲಿಯೇ ಇದನ್ನು ಮಾಡಲು ಆಗಲ್ಲ ಎಂದಿದ್ದರು. ಅನಂತರ ಸಮಿತಿಯೊಂದನ್ನು ರಚಿಸಿ, ಅದರಲ್ಲಿ ಚರ್ಚೆಯಾದ ಬಳಿಕ, ಎಲ್ಲರೂ ತಾತ್ವಿಕವಾಗಿ ಒಪ್ಪಿದ್ದರು. ಆದರೆ, ನಂತರದ ದಿನಗಳಲ್ಲಿ ಅದು ಮೂಲೆಗುಂಪಾಯಿತು ಎಂದು ವಿಷಾದಿಸಿದರು.

ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಅಂಗನವಾಡಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಹೋರಾಟ ಕಾರ್ಮಿಕರಿಗೆ ಅಷ್ಟೇ ಸೀಮಿತವಾಗಬಾರದು. ಕನ್ನಡ ಪರ, ದಲಿತ, ಹಿಂದುಳಿದ ವರ್ಗದವರನ್ನು ಜತೆಗೂಡಿಸಿಕೊಳ್ಳಬೇಕು. ಇದು ಜನಪರ ಚಳವಳಿ ಎಂದು ಎಲ್ಲರಿಗೂ ಅರ್ಥ ಮಾಡಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿರುವ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಗ್ರಾಮೀಣ ಪ್ರದೇಶದ ಮೂರು ವರ್ಷದ ಮಕ್ಕಳು ನರಕ ಅನುಭವಿಸುತ್ತಿದ್ದಾರೆ. ಹಣದ ಆಸೆಯಿಂದಾಗಿ, ಮಕ್ಕಳ ಬೌದ್ಧಿಕ ಶಕ್ತಿಯನ್ನೇ ನಾಶ ಮಾಡಿ, ಇಂಗ್ಲೀಷ್ ಅನ್ನು ತಲೆಗೆ ತುಂಬುತ್ತಿದ್ದಾರೆ. ಹೀಗಾಗಿ, ಇದೊಂದು ಸಾಂಸ್ಕೃತಿಕ, ಸಾಮಾಜಿಕ ಚಳವಳಿಯಾಗಿ ರೂಪಗೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಸಿಬಿಪಿಎಸ್ ನಿರ್ದೇಶಕಿ ಡಾ.ಜೋತ್ಸ್ನಾ ಝಾ, ಪ್ರಾಧ್ಯಾಪಕ ಡಾ.ವಿಠ್ಠಲ ಭಂಡಾರಿ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಎಂ.ವಿ.ಪ್ರತಿಭಾ, ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ಎಚ್.ಎಸ್.ಸುನಂದ ಸೇರಿದಂತೆ ಹಲವರಿದ್ದರು.

ಇಂದಿನ ಶಾಲೆಗಳಲ್ಲಿ ಮಕ್ಕಳಿಗೆ ಅತಿಯಾದ ಶಿಸ್ತನ್ನು ಕಲಿಸಲಾಗುತ್ತಿದೆ. ಶಾಲೆಗಳು ಎಂದರೆ ಮಕ್ಕಳೇ ಮುಖ್ಯವಾಗಬೇಕು. ಆದರೆ, ಇಂದು ಶಾಲೆಗಳಲ್ಲಿ ಶಿಕ್ಷಕರೇ ಪ್ರಮುಖವಾಗುತ್ತಿದ್ದಾರೆ. ಇದು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಆಪ್ತತೆ ಎಂಬುದು ಮರೆಯಾಗಿ, ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ.

-ಡಾ.ಜೋತ್ಸ್ನಾ ಝಾ, ಸಿಬಿಪಿಎಸ್ ನಿರ್ದೇಶಕಿ

       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News