ಆಸ್ಟ್ರೇಲಿಯ ಕಾಡ್ಗಿಚ್ಚು: 12 ಸಾವು

Update: 2020-01-01 15:37 GMT

ಸಿಡ್ನಿ (ಆಸ್ಟ್ರೇಲಿಯ), ಜ. 1: ಆಸ್ಟ್ರೇಲಿಯದ ಆಗ್ನೇಯ ಕರಾವಳಿಯನ್ನು ಈ ವಾರ ಆವರಿಸಿರುವ ಕಾಡ್ಗಿಚ್ಚಿನಲ್ಲಿ ಮೂರನೇ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಅದೇ ವೇಳೆ, ಇನ್ನೋರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.

ಇದರೊಂದಿಗೆ ಆಸ್ಟ್ರೇಲಿಯದಲ್ಲಿ ಕೆಲವು ತಿಂಗಳ ಹಿಂದೆ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 12ಕ್ಕೇರಿದೆ. ಮೃತಪಟ್ಟವರಲ್ಲಿ ಮೂವರು ಸ್ವಯಂಸೇವಕ ಅಗ್ನಿಶಾಮಕ ಸಿಬ್ಬಂದಿಯಾಗಿದ್ದಾರೆ.

ಹೆಚ್ಚುತ್ತಿರುವ ಉಷ್ಣತೆಯಿಂದಾಗಿ ವ್ಯಾಪಕವಾಗಿ ಹಬ್ಬುತ್ತಿರುವ ಬೆಂಕಿಯು ಸೋಮವಾರ ಮತ್ತು ಮಂಗಳವಾರ ಇಡೀ ಪಟ್ಟಣಗಳನ್ನೇ ಸುಟ್ಟು ಹಾಕಿದೆ. ಹಾಗಾಗಿ, ಸಾವಿರಾರು ನಿವಾಸಿಗಳು ಮತ್ತು ಪ್ರವಾಸಿಗರು ಸಮುದ್ರ ದಂಡೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಜನರು ಸಮುದ್ರದ ಆಳವಿಲ್ಲದ ನೀರಿನಲ್ಲಿ ನಿಂತು ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡರು.

ಕಾಡ್ಗಿಚ್ಚು ಒಂದು ಕೋಟಿ ಎಕರೆಗೂ ಅಧಿಕ ಪ್ರದೇಶವನ್ನು ಸುಟ್ಟು ಹಾಕಿದೆ ಹಾಗೂ ಪ್ರತಿ ದಿನವೆಂಬಂತೆ ಹೊಸದಾಗಿ ಬೆಂಕಿ ಹುಟ್ಟಿಕೊಳ್ಳುತ್ತಿದೆ. ಬಿಸಿ ಮತ್ತು ಗಾಳಿಯ ವಾತಾವರಣದಲ್ಲಿ ಕಾಡ್ಗಿಚ್ಚು ಹೊಸ ಪ್ರದೇಶಗಳಿಗೆ ವೇಗವಾಗಿ ಹಬ್ಬುತ್ತಿದೆ.

ಬುಧವಾರ ಕೊಂಚ ತಂಪು ವಾತಾವರಣ ನೆಲೆಸಿದ್ದು, ಕಾಡ್ಗಿಚ್ಚು ಸೃಷ್ಟಿಸಿದ ನಷ್ಟದ ಪ್ರಮಾಣವನ್ನು ಅಂದಾಜು ಮಾಡಲು ಅಧಿಕಾರಿಗಳಿಗೆ ಕೊಂಚ ಸಮಯಾವಕಾಶ ಲಭಿಸಿತು. ಆದರೂ, ನ್ಯೂಸೌತ್‌ವೆಲ್ಸ್ ರಾಜ್ಯವೊಂದರಲ್ಲೇ 100ಕ್ಕೂ ಅಧಿಕ ಕಾಡ್ಗಿಚ್ಚುಗಳು ಉರಿಯುತ್ತಿವೆ ಹಾಗೂ ಸಾವಿರಾರು ಅಗ್ನಿಶಾಮಕರು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.

ನೌಕಾ ಪಡೆ, ಸೇನಾ ವಿಮಾನಗಳ ಮೂಲಕ ನೆರವು ಪೂರೈಕೆ

ಪ್ರಳಯಾಂತಕ ಕಾಡ್ಗಿಚ್ಚಿನಿಂದ ಪಾರಾಗಲು ಸಮುದ್ರ ತೀರದಲ್ಲಿ ಸೇರಿರುವ ಸಾವಿರಾರು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಆಸ್ಟ್ರೇಲಿಯ ಸರಕಾರವು ಬುಧವಾರ ಸೇನಾ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ.

ಕಾಡ್ಗಿಚ್ಚಿನಿಂದಾಗಿ ರಸ್ತೆಗಳು ಬಂದ್ ಆಗಿ ವಸ್ತುಗಳ ಪೂರೈಕೆ ನಿಂತಿರುವ ಪಟ್ಟಣಗಳಿಗೆ ನೌಕಾ ಹಡಗುಗಳು ಮತ್ತು ಸೇನಾ ವಿಮಾನಗಳು ನೀರು, ಆಹಾರ ಮತ್ತು ಇಂಧನಗಳನ್ನು ತರುತ್ತಿವೆ.

ಮಂಗಳವಾರ ಬೆಳಗ್ಗೆ ಕರಾವಳಿ ಪಟ್ಟಣ ಮಾಲಕೂಟವನ್ನು ಕಾಡ್ಗಿಚ್ಚು ಸುತ್ತುವರಿದಾಗ ಸುಮಾರು 4000 ಮಂದಿ ಸಮುದ್ರ ತೀರಕ್ಕೆ ಧಾವಿಸಿದರು. ಮಂಗಳವಾರ ಸಂಜೆಯ ಹೊತ್ತಿಗೆ ಗಾಳಿಯ ದಿಕ್ಕು ಬದಲಾಗುವ ಮುನ್ನ ಪಟ್ಟಣದ ನೂರಾರು ಮನೆಗಳು ಭಸ್ಮವಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News