×
Ad

ಅಕ್ರಮ ಜಮೀನು ಮಾರಾಟ: ಅರೆ ನ್ಯಾಯಿಕ ಅಧಿಕಾರ ಮೊಟಕು- ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-01-01 23:01 IST

ಬೆಂಗಳೂರು, ಜ.1: ಬೆಂಗಳೂರಿನ ಮುಳ್ಳೂರು ಗ್ರಾಮದಲ್ಲಿ ಸರಕಾರಿ ಜಮೀನನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ನಗರ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕಿ ಪಿ.ಎಸ್.ಕುಸುಮಲತಾರವರು ಹೊಂದಿದ್ದ ಅರೆ ನ್ಯಾಯಿಕ ಅಧಿಕಾರವನ್ನು ಮೊಟಕುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ಪಿ.ಎಸ್.ಕುಸುಮಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು.

ಮುಳ್ಳೂರು ಗ್ರಾಮದ ಸರ್ವೇ ನಂ.49/7ರಲ್ಲಿ(ಹೊಸ ಸರ್ವೇ ನಂ 114)4 ಎಕರೆ 2 ಗುಂಟೆ ಸರಕಾರಿ ಜಮೀನನ್ನು ಅರ್ಜಿದಾರರು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಫಾದರ್ ಮ್ಯಾಥ್ಯೂ ಎಂಬುವರು ದೂರು ನೀಡಿದ್ದರು. ಆಯುಕ್ತರ ನಿರ್ದೇಶನದ ಮೇರೆಗೆ ಈ ಬಗ್ಗೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ವಿಚಾರಣೆ ನಡೆಸಿ, ವರದಿ ಸಲ್ಲಿಸಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ಕುಸುಮಲತಾ ಅವರು ತಮ್ಮ ಅರೆ ನ್ಯಾಯಿಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದರು. ನಂತರ ಕುಸುಮಲತಾ ಅವರನ್ನು ಬೆಂಗಳೂರು ನಗರ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕಿ ಹುದ್ದೆಯಿಂದ ಅಮಾನತ್ತಿನಲ್ಲಿರಿಸಿ, ಅವರ ಮುಂದೆ ವಿಚಾರಣೆಗೆ ಬಾಕಿಯಿದ್ದ ಪ್ರಕರಣಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಭಾಗದ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ವರ್ಗಾಯಿಸಿ 2019ರ ಡಿ.23ರಂದು ಆದೇಶ ಹೊರಡಿಸಿದ್ದರು.

ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕುಸುಮಲತಾ ಅವರು, ಪ್ರಾದೇಶಿಕ ಆಯುಕ್ತರು ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದಾರೆ. ಇಂತಹ ಆದೇಶ ಹೊರಡಿಸಲು ಅವರು ಸಕ್ಷಮ ಪ್ರಾಧಿಕಾರವಲ್ಲ. ಕಂದಾಯ ಪ್ರಕರಣಗಳಲ್ಲಿ ರಾಜ್ಯ ಸರಕಾರ ಮುಖ್ಯ ನಿಯಂತ್ರಣ ಪ್ರಾಧಿಕಾರವಾಗಿರುತ್ತದೆ. ಹೀಗಾಗಿ, ಪ್ರಾದೇಶಿಕ ಆಯುಕ್ತರ ಆದೇಶ ರದ್ದುಗೊಳಿಸಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News