ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

Update: 2020-01-02 18:19 GMT

ಭಾರತೀಯ ಸಮಾಜದ ಸಾಂಪ್ರದಾಯಿಕ ಕಟ್ಟುಪಾಡು, ಅಂಧಶ್ರದ್ಧೆ ಮತ್ತು ಮೌಢ್ಯಗಳನ್ನು ಮೀರಿ ಓರ್ವ ಸ್ತ್ರೀಯು ತನ್ನನ್ನು ಸಮಾಜದ ಸೇವೆಗಾಗಿ ಮುಡಿಪಾಗಿಡುವುದು ಅಷ್ಟು ಸುಲಭವಾದ ಸಂಗತಿಯಾಗಿರಲಿಲ್ಲ. ಸಾವಿತ್ರಿಬಾಯಿಯವರು ಪತಿಯ ಸಮಾಜ ಸುಧಾರಣೆಯ ಕಾರ್ಯಗಳಿಗೆ ಹೆಗಲುಗೊಟ್ಟು ನಿಂತು ಅವರಿಗೆ ಆತ್ಮಸ್ಥೈರ್ಯ ತುಂಬಿದ ಮಹಿಳೆಯಾಗಿದ್ದರು. ಸಮಾಜದಲ್ಲಿ ತೀವ್ರ ಶೋಷಣೆಗೊಳಗಾಗಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದ ಸಮಾಜದ ಅಂಚಿಗೆ ತಳ್ಳಲ್ಪಟ್ಟ ದಮನಿತರ ಎದೆಯಲ್ಲಿ ಅಕ್ಷರದ ಬೀಜವನ್ನು ಬಿತ್ತಿದರು.


ವಿದ್ಯಾದಾನವು ಶ್ರೇಷ್ಠವಾದ ದಾನವಾಗಿದೆ. ಬೇರೆಲ್ಲ ದಾನಗಳಿಗಿಂತಲೂ ಜ್ಞಾನ ದಾಸೋಹದ ಮೂಲಕ ವಿದ್ಯೆಯನ್ನು ಸಮಾಜದ ಅಂಚಿಗೆ ತಳ್ಳಲ್ಪಟ್ಟ ಅಸ್ಪಶ್ಯ ತಳಸಮುದಾಯ ಮತ್ತು ಎಲ್ಲ ಜಾತಿಯ ಮಹಿಳೆಯರಿಗೆ ವಿದ್ಯಾದಾನ ಮಾಡಿ ಸಮಾಜವನ್ನು ಪರಿವರ್ತಿಸುವಲ್ಲಿ ಶ್ರಮಿಸಿದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ. ಸಾವಿತ್ರಿಬಾಯಿ ಸ್ವತಃ ಜ್ಞಾನವನ್ನು ಅರ್ಜಿಸಿ ದೇಶದಲ್ಲಿಯೇ ಮೊತ್ತ ಮೊದಲ ಶಾಲೆಯನ್ನು ತೆರೆದು ಶಿಕ್ಷಣದಿಂದ ವಂಚಿತರಾಗಿದ್ದ ಅಸ್ಪಶ್ಯರಿಗೆ ಅದರಲ್ಲೂ ಅಸ್ಪಶ್ಯ ಬಾಲಕಿಯರಿಗೆ ವಿದ್ಯೆಯನ್ನು ಧಾರೆ ಎರೆದದ್ದು ಹೊಸ ಮನ್ವಂತರ ಸೃಷ್ಟಿಗೆ ಕಾರಣವಾಯಿತೆಂಬುದು ಇತಿಹಾಸ. ಭಾರತೀಯ ಶಿಕ್ಷಣ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ ಕೀರ್ತಿ ಫುಲೆ ದಂಪತಿಯದ್ದು. ಅವರ ಅವಿರತ ಹೋರಾಟದಿಂದಾಗಿ ಶಿಕ್ಷಣದಿಂದ ವಂಚಿತವಾದ ತಳಸಮುದಾಯಗಳು 1850ರ ದಶಕದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಪ್ರವೇಶಿಸುವಂತಾಯಿತು.

ಸಾವಿತ್ರಿಬಾಯಿ ಹಾಗೂ ಪತಿ ಜೋತಿರಾವ್ ಫುಲೆಯವರು ತಮ್ಮ ಈ ಹೊಸ ಮನ್ವಂತರದ ಅನ್ವೇಷಣೆಯ ಪಥದಲ್ಲಿ ಕಲ್ಲು-ಮುಳ್ಳು, ಕಂದರ ಮತ್ತು ಅಂಧಕಾರದಿಂದ ತುಂಬಿದ ಕತ್ತಲೆಯನ್ನು ಸೀಳಿ ಮುನ್ನಡೆಯುವುದು ಅಷ್ಟು ಸುಲಭವಾದ ಕಾರ್ಯವಾಗಿರಲಿಲ್ಲ. ಸಂಪ್ರದಾಯಶೀಲ ಶಕ್ತಿಗಳ ಒತ್ತಡದಿಂದ ಪಡಬಾರದ ಪಡಿಪಾಟಲು ಅನುಭವಿಸುವ ಪರಿಸ್ಥಿತಿ ಇತ್ತು. ಸಂಪ್ರದಾಯಶೀಲ ಮನೋಭಾವದ ಜನರು ನೀಡಿದ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಸಹಿಸಿಕೊಂಡು ತಾವು ನಂಬಿದ ಮೌಲ್ಯಗಳ ಸಾಕಾರಕ್ಕಾಗಿ ಫುಲೆ ದಂಪತಿ ಹಗಲಿರುಳು ಶ್ರಮಿಸಿದರು. ತಮ್ಮ ಕಾರ್ಯಗಳಿಗೆ ತೀವ್ರ ಪ್ರತಿರೋಧ ಎದುರಿಸಿದ್ದು ಮಾತ್ರವಲ್ಲ, ಸಾಮಾಜಿಕ ಬಹಿಷ್ಕಾರಕ್ಕೊಳಗಾಗುವಂತಾಯಿತು. ಜ್ಯೋತಿಬಾ ಫುಲೆಯವರ ತಂದೆ ಗೋವಿಂದರಾವ್ ಸಂಪ್ರದಾಯವಾದಿಗಳ ಒತ್ತಡಗಳಿಗೆ ಮಣಿದು ಫುಲೆ ದಂಪತಿಯನ್ನು ಮನೆಯಿಂದ ಹೊರದಬ್ಬುವಂತಾಯಿತು. ಇಷ್ಟೆಲ್ಲಾ ಆದರೂ ಸಹಿತ ಫುಲೆ ದಂಪತಿ ಧೃತಿಗೆಡದೆ ಧೈರ್ಯ, ದೃಢಸಂಕಲ್ಪ, ಕಠಿಣ ಪರಿಶ್ರಮ ಹಾಗೂ ತಾವು ಹಿಡಿದ ಹಾದಿ ಎಷ್ಟೇ ದುರ್ಗಮವಾಗಿದ್ದರೂ ಛಲ ಬಿಡದೆ ತಮ್ಮ ಗುರಿಯನ್ನು ಸಾಧಿಸಲು ಶ್ರಮಿಸಿರುವುದು ಇತಿಹಾಸ. ಫುಲೆ ದಂಪತಿಯ ಶ್ರಮ ಮತ್ತು ತ್ಯಾಗವು ಅನುಕರಣೀಯ ಮತ್ತು ಅವಿಸ್ಮರಣೀಯ.

ಜ್ಯೋತಿಬಾ ಫುಲೆಯವರಿಗೆ ತಮ್ಮನ್ನು ಹಿಂಬಾಲಿಸುವ ಸಂಗಾತಿ ಬೇಕಿರಲಿಲ್ಲ. ಸ್ವತಂತ್ರವಾಗಿ ಯೋಚಿಸುವ, ಚಿಂತಿಸುವ ಮತ್ತು ವೈಚಾರಿಕ ಚಿಂತನೆ ಮೈಗೂಡಿಸಿಕೊಂಡು ತಮ್ಮ ಜೊತೆಗೆ ಹೋರಾಟದ ಸಂಗಾತಿಯಾಗಿ ಬದುಕುವ ಹೆಂಡತಿಯನ್ನು ಜೋತಿಬಾ ಫುಲೆ ಸಾವಿತ್ರಿಬಾಯಿಯವರಲ್ಲಿ ಕಂಡುಕೊಂಡರು. ಸಾವಿತ್ರಿಬಾಯಿ ಪತಿಯ ನಿಷ್ಕಲ್ಮಷ ಹೃದಯ, ವೈಶಾಲ್ಯತೆಯಿಂದ ಕೂಡಿದ ವ್ಯಕ್ತಿತ್ವ ಮತ್ತು ಸದಾ ಕ್ರಿಯಾಶೀಲವಾಗಿ ಹೊಸ ಸಮಾಜದ ಸೃಷ್ಟಿಗಾಗಿ ದುಡಿಯುತ್ತಿದ್ದ ಜ್ಯೋತಿಬಾರಿಗೆ ತಕ್ಕ ಪತ್ನಿಯಾಗಿದ್ದರು. ಜ್ಯೋತಿಬಾರಿಗಿಂತ ಸಾವಿತ್ರಿಬಾಯಿ ಫುಲೆಯವರ ಶ್ರಮ ಅನುಕರಣೀಯವಾದುದು. ಭಾರತೀಯ ಸಮಾಜದ ಸಾಂಪ್ರದಾಯಿಕ ಕಟ್ಟುಪಾಡು, ಅಂಧಶ್ರದ್ಧೆ ಮತ್ತು ಮೌಢ್ಯಗಳನ್ನು ಮೀರಿ ಓರ್ವ ಸ್ತ್ರೀಯು ತನ್ನನ್ನು ಸಮಾಜದ ಸೇವೆಗಾಗಿ ಮುಡಿಪಾಗಿಡುವುದು ಅಷ್ಟು ಸುಲಭವಾದ ಸಂಗತಿಯಾಗಿರಲಿಲ್ಲ. ಸಾವಿತ್ರಿಬಾಯಿಯವರು ಪತಿಯ ಸಮಾಜ ಸುಧಾರಣೆಯ ಕಾರ್ಯಗಳಿಗೆ ಹೆಗಲುಗೊಟ್ಟು ನಿಂತು ಅವರಿಗೆ ಆತ್ಮಸ್ಥೆರ್ಯ ತುಂಬಿದ ಮಹಿಳೆಯಾಗಿದ್ದರು. ಸಮಾಜದಲ್ಲಿ ತೀವ್ರ ಶೋಷಣೆಗೊಳಗಾಗಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಶೂದ್ರಾತಿಶೂದ್ರರಿಗಾಗಿ ಪ್ರಥಮ ಹೆಣ್ಣುಮಕ್ಕಳ ಶಾಲೆಯನ್ನು ಪುಣೆಯ ಬುಧವಾರಪೇಟೆಯಲ್ಲಿದ್ದ ಭಿಡೆಯವರ ಮನೆಯಲ್ಲಿ 1848ರಲ್ಲಿ ಪ್ರಾರಂಭಿಸಿದರು. ಈ ಶಾಲೆಯನ್ನು ಪ್ರಾರಂಭಿಸಲು ಸದಾಶಿವ ಗೋವಂಡೆ ಮತ್ತು ಸದಾಶಿವ ಗೋವಿಂದ ಹಾಟೆಯವರು ಎಲ್ಲ ರೀತಿಯ ನೆರವು ನೀಡಿದರು.

ಜ್ಯೋತಿಬಾ ಫುಲೆಯವರು ಅಸ್ಪಶ್ಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದ್ದು ಸಂಪ್ರದಾಯವಾದಿಗಳ ಪಿತ್ತನೆತ್ತಿಗೇರುವಂತೆ ಮಾಡಿತು. ಸಂಪ್ರದಾಯದನ್ವಯ ಶಿಕ್ಷಣದ ಹಕ್ಕನ್ನು ಅಸ್ಪಶ್ಯರಿಗೆ ನಿರಾಕರಿಸಲಾಗಿತ್ತು. ಅಂತಹ ಸಂಪ್ರದಾಯ ಧಿಕ್ಕರಿಸಿ ಅಸ್ಪಶ್ಯರಿಗೆ ಶಿಕ್ಷಣ ನೀಡುವ ಫುಲೆ ದಂಪತಿಯವರ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸಲಾಯಿತು. ಶಾಲೆ ಏನೋ ಪ್ರಾರಂಭವಾಯಿತು. ಶಿಕ್ಷಕರ ಕೊರತೆಯನ್ನು ಎದುರಿಸಬೇಕಾಯಿತು. ಮೊದ ಮೊದಲು ಶಿಕ್ಷಕರಾಗಿ ಕೆಲಸ ಮಾಡಲು ಒಬ್ಬಿಬ್ಬರು ಆಸಕ್ತಿ ತೋರಿದರೂ ಸಮಾಜದ ಕೊಂಕುದೃಷ್ಟಿ, ಕಿರುಕುಳ ಹಾಗೂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ತಮ್ಮ ಶಿಕ್ಷಕ ವೃತ್ತಿಗೆ ತಿಲಾಂಜಲಿ ಇತ್ತರು. ಇದರಿಂದ ಕಂಗೆಟ್ಟ ಜ್ಯೋತಿಬಾ ಅವರು ತಮ್ಮ ಪತ್ನಿ ಸಾವಿತ್ರಿಬಾಯಿ ಫಲೆಯವರಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡಿದರು. 1848ರಲ್ಲಿ ಪುಣೆ ಸರಕಾರಿ ಮರಾಠಾ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದ ಕೇಶವ ಶಿವರಾಮ ಭಾವಳ್ಕರ ಸಾವಿತ್ರಿಬಾಯಿಯವರಿಗೆ ಶಿಕ್ಷಣ ನೀಡಲು ಒಪ್ಪಿಕೊಂಡರು. ಸಾವಿತ್ರಿಬಾಯಿ ಫುಲೆಯವರೊಂದಿಗೆ ಜ್ಯೋತಿಬಾರ ಸ್ನೇಹಿತ ಸದಾಶಿವರಾವ್ ಗೋವಂಡೆಯವರ ಪತ್ನಿಯೂ ಕೂಡ ಶಿಕ್ಷಣ ಪಡೆಯಲು ಪ್ರಾರಂಭಿಸಿದರು. ಗೋವಂಡೆಯವರ ಪೇಟೆ ಜುನಾರಗಂಜ್‌ನಲ್ಲಿ ಒದಗಿಸಿದ ಸ್ಥಳದಲ್ಲಿ ಜ್ಯೋತಿಬಾ ಫುಲೆ ಪುನಃ ಶಾಲೆಯನ್ನು ಪ್ರಾರಂಭಿಸಿ ಸಾವಿತ್ರಿಬಾಯಿ ಫುಲೆಯವರನ್ನು ಶಿಕ್ಷಕ ವೃತ್ತಿಗೆ ನೇಮಿಸಿದರು. ಭಾರತೀಯ ಸಮಾಜದಲ್ಲಿ ಹೊಸ ಮನ್ವಂತರ ಸೃಷ್ಟಿಗೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದು ಕಾರಣವಾಯಿತು. ಇದೊಂದು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿಯವರ ಬಹುದೊಡ್ಡ ಸಾಧನೆಯಾಗಿತ್ತು.

ಮೂರು ಸಾವಿರ ವರ್ಷಗಳ ಭಾರತದ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಕಟ್ಟಕಡೆಯ ಅಸ್ಪಶ್ಯರಿಗೆ ಜ್ಞಾನದ ಹೆಬ್ಬಾಗಿಲು ತೆರೆಯಿತು. ಸಾವಿತ್ರಿಬಾಯಿ ಫುಲೆಯವರ ಅಕ್ಷರ ಕ್ರಾಂತಿಗೆ ಬೆಂಬಲ ನೀಡಿದ ಮತ್ತೋರ್ವ ಶಿಕ್ಷಕಿ ಫಾತಿಮಾ ಶೇಖ್ ಅವರ ಶ್ರಮ ಕೂಡ ದಾಖಲಾರ್ಹ. ಫುಲೆ ದಂಪತಿ ತಾವಿದ್ದ ಹಿರಿಯರ ಮನೆಯಿಂದ ಹೊರ ಹಾಕಲ್ಪಟ್ಟಾಗ ಅವರಿಗೆ ಆಸರೆಯಾಗಿ ನಿಂತಿದ್ದು ಜ್ಯೋತಿಭಾ ಫುಲೆಯವರ ಮಿತ್ರ ಉಸ್ಮಾನ್ ಶೇಖ್. ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿದ್ದ ಈ ಯುವಕ ತಮ್ಮ ಮನೆಯನ್ನೇ ಶಾಲೆ ನಡೆಸಲು ಫುಲೆ ದಂಪತಿಗೆ ನೀಡಿದ್ದರು. ಉಸ್ಮಾನ್ ಶೇಖ್ ತನ್ನ ಸಹೋದರಿ ಫಾತಿಮಾ ಶೇಖ್‌ರನ್ನು ಶಿಕ್ಷಣ ಪಡೆಯಲು ಪ್ರೇರೇಪಿಸಿದರು. ಫಾತಿಮಾ ಶಿಕ್ಷಕಿ ತರಬೇತಿ ಪೂರ್ಣಗೊಳಿಸಿ ಭಾರತದ ಪ್ರಥಮ ಮುಸ್ಲಿಮ್ ಶಿಕ್ಷಕಿಯಾಗಿ ದೇಶದ ಮುಸ್ಲಿಮ್ ಮಹಿಳೆಯರ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದರು. ಸಾವಿತ್ರಿಬಾಯಿಯವರ ಜೊತೆಗೂಡಿ ಅಕ್ಷರ ವಂಚಿತ ದಮನಿತರೆದೆಯಲ್ಲಿ ಅಕ್ಷರ ಬಿತ್ತುವ ಕೈಂಕರ್ಯದಲ್ಲಿ ನೆರವಾಗಿ ಅಕ್ಷರಕ್ರಾಂತಿಯನ್ನು ಮುನ್ನಡೆಸುವಲ್ಲಿ ಫಾತಿಮಾ ಶೇಖ್‌ರ ಕೊಡುಗೆ ದೇಶ ಎಂದೂ ಮರೆಯಲಾಗದ್ದು. 1851ರ ಜುಲೈ 3ರಂದು ಪುಣೆಯ ಬುಧವಾರಪೇಟೆಯಲ್ಲಿರುವ ಅಣ್ಣಾಸಾಹೇಬ ಚಿಪ್ಳೂಂಣಕರ್ ಮನೆಯಲ್ಲಿ ಇನ್ನೊಂದು ಶಾಲೆಯನ್ನು ಹೆಣ್ಣು ಮಕ್ಕಳಿಗಾಗಿ ಪ್ರಾರಂಭಿಸಿದರು. ಆರಂಭದಲ್ಲಿ ಎಂಟು ಜನ ಹೆಣ್ಣು ಮಕ್ಕಳಿಂದ ಪ್ರಾರಂಭಗೊಂಡ ಶಾಲೆ 48 ಜನರು ಸೇರಿಸಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಬ್ರಾಹ್ಮಣರಾದಿಯಾಗಿ ಮೇಲ್ಜಾತಿಯ ಸ್ತ್ರೀಯರಿಗೆ ಶಿಕ್ಷಣ ಸಿಗದೇ ಇದ್ದಂತಹ ಕಾಲದಲ್ಲಿ ಅಸ್ಪಶ್ಯ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆದು ಹೊಸ ಸಮಾಜದ ಸೃಷ್ಟಿಗೆ ಸಾವಿತ್ರಿಬಾಯಿ ಕಾರಣರಾದರು.

1851ರ ಸೆಪ್ಟಂಬರ್ 17ರಂದು ರಾಸ್ತಾ ಪೇಟೆಯಲ್ಲಿ ಮತ್ತು ಮಾರ್ಚ್ 15, 1952ರಲ್ಲಿ ವಿಠ್ಠಲ ಪೇಟೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದರು. ಫುಲೆ ದಂಪತಿ ಪ್ರಾರಂಭಿಸಿದ್ದ ಶಾಲೆಗಳಿಗೆ ಅಸ್ಪಶ್ಯ ಮಾಂಗ್ ಮತ್ತು ಮಹಾರ್ ಜಾತಿಯ ಬಾಲಕಿಯರು ಪ್ರವೇಶ ಪಡೆಯಲು ಹಾಗೂ ಶಿಕ್ಷಣ ಹೊಂದಲು ಸಹಾಯ ಮಾಡಿ ಅವರಿಗೆ ಬೆನ್ನೆಲುಬಾಗಿ ನಿಂತವರು ಲಾಹೂಜಿ ರಂಗರೂತ್ ಮಾಂಗ್ ಮತ್ತು ರಾಣ ಮಹಾರ. ಪ್ರೆಸಿಡೆಂಡ್ ಆಫ್ ಬೋರ್ಡ್ ಆಫ್ ಎಜ್ಯುಕೇಶನ್ ಮಿ. ವಾರ್ಡನ್ ಪುಣೆಯಲ್ಲಿ 1857ರಲ್ಲಿ ಜ್ಯೂಡಿಸಿಯಲ್ ಕಮಿಷನರ್ ಆಗಿದ್ದಾಗ ಶಾಲೆಗೆ ಭೇಟಿ ನೀಡಿ ‘‘ಸಾವಿತ್ರಿಬಾಯಿಯವರ ನಿರಂತರ ಪರಿಶ್ರಮ, ಅಗಾಧ ಚೈತನ್ಯ ಮತ್ತು ಎಂದೂ ಬತ್ತದ ಉತ್ಸಾಹದ ಫಲವಾಗಿ ಶಾಲೆಯು ಉತ್ತಮ ಗುಣಮಟ್ಟವನ್ನು ಸಾಧಿಸುವಲ್ಲಿ ಸಫಲವಾಗಿದೆ. ಜನರ ಅಜ್ಞಾನ ಮತ್ತು ಅಂಧಕಾರವನ್ನು ತೊಲಗಿಸಲು ಶಿಕ್ಷಣವೊಂದು ಪ್ರಬಲ ಮಾಧ್ಯಮ. ಫುಲೆ ದಂಪತಿಯ ಶ್ರಮ ದಾಖಲಾರ್ಹವಾದುದು’’ ಎಂದು ಹೇಳಿರುವರು. ಫುಲೆ ದಂಪತಿಯ ಸಮಾಜ ಸುಧಾರಣೆಯ ಮಹತ್ವದ ಕಾರ್ಯದ ಹಿಂದೆ ಅವರಿಗೆ ಬೆಂಬಲ ನೀಡಿದವರು ಸಮಾಜ ಪರಿವರ್ತನೆ ತರಲು ಹಂಬಲಿಸುತ್ತಿದ್ದ ಮತ್ತು ವೈಚಾರಿಕ ವಿಚಾರಧಾರೆಯ ಪ್ರಗತಿಪರ ಚಿತ್ಪಾವನ ಬ್ರಾಹ್ಮಣ ಮುಖಂಡರಾದ ಸದಾಶಿವರಾವ್ ಗೋವಂಡೆ, ಅಣ್ಣಾ ಸಾಹೇಬ ಚಿಪ್ಳೂಂಣಕರ್, ಅಮೀನ ರಾವ್‌ಸಾಹೇಬ, ಕೃಷ್ಣರಾವ್ ವಿಂಚುರಕರ್, ಕೇಶವ ಶಿವರಾಮ ಜೋಶಿ, ಪ್ರೊ.ಕೃಷ್ಣಶಾಸ್ತ್ರಿ ಚಿಪ್ಳೂಂಣಕರ್, ವಿಷ್ಣುಶಾಸ್ತ್ರಿ ಪಂಡಿತ್, ಅಣ್ಣಾ ಸಹಸ್ರಬುದ್ಧೆ ಹಾಗೂ ವಿಷ್ಣು ಮೋರೇಶ್ವರ ಭಿಡೆ ಪ್ರಮುಖರಾಗಿದ್ದಾರೆ. ಸಾವಿತ್ರಿಬಾಯಿ ಫುಲೆಯವರ ಮಾತೃ ಹೃದಯ ವಿಶಾಲವಾಗಿತ್ತು. ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಮಧ್ಯಾಹ್ನ ಉಪಾಹಾರವನ್ನು ನೀಡಿ ಪ್ರೀತಿಯಿಂದ ಸಲಹುತ್ತಿದ್ದರು. ತಮ್ಮ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಶಾಲೆಗೆ ಬರುವ ಮಕ್ಕಳು ಉಪವಾಸದಿಂದಿರುವುದು ಬೇಡವೆಂದು ಅವರಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದು ಅವರ ತ್ಯಾಗಮಯ ಜೀವನಕ್ಕೊಂದು ನಿದರ್ಶನ. ಸಾವಿತ್ರಿಬಾಯಿಯವರು 1852ರಲ್ಲಿ ಮಹಿಳಾ ಸೇವಾ ಮಂಡಳ ಸ್ಥಾಪಿಸಿದ್ದರು. ವಿಧವಾ ಮಹಿಳೆಯರ ತಲೆ ಬೋಳಿಸುವುದನ್ನು ಪ್ರತಿಬಂಧಿಸಲು ಕ್ಷೌರಿಕರಿಂದ ಹರತಾಳ ಮಾಡಿಸಿದರು.

1853ರಲ್ಲಿ ವಿಧವೆಯರಿಗಾಗಿ ವಿಧವಾ ಅಬಲಾಶ್ರಮ ಪ್ರಾರಂಭಿಸಿದರು. ಫುಲೆ ದಂಪತಿ ಅಸ್ಪಶ್ಯ ಹೆಣ್ಣು ಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸುವುದಕ್ಕಷ್ಟೇ ತೃಪ್ತಿ ಹೊಂದಲಿಲ್ಲ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ವಯಸ್ಕರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿದರು. ಈ ರಾತ್ರಿ ಶಾಲೆಗಳಲ್ಲಿ ಫುಲೆ ದಂಪತಿ ಅಶಿಕ್ಷಿತ ವಯಸ್ಕ ರೈತರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು. ಪುಣೆಯಲ್ಲಿ ವಿಧವೆಯರ ಸಂಕಷ್ಟ ಜೀವನ ಹಾಗೂ ಶೋಷಣೆಯನ್ನು ನೋಡಲಾಗದೆ ವಿಧವೆಯರ ಪುನರ್ವಿವಾಹವನ್ನು ಜ್ಯೋತಿಬಾಫುಲೆ ನೆರವೇರಿಸಿದ್ದರ ಹಿಂದಿನ ಪ್ರೇರಕಶಕ್ತಿ ಸಾವಿತ್ರಿಬಾಯಿ ಆಗಿದ್ದರು. ಆಗಿನ ಕಾಲದಲ್ಲಿ ವಿಧವೆಯರಿಗೆ ತೀವ್ರ ಕಿರುಕುಳ, ಲೈಂಗಿಕ ಶೋಷಣೆ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತಿತ್ತು. ವಿಧವೆಯರಿಗೆ ನೆರವಾಗಲು ವಿಧವಾ ಅಬಲಾಶ್ರಮ ಪ್ರಾರಂಭಿಸಲಾಯಿತು. ಲೈಂಗಿಕ ದೌರ್ಜನ್ಯದಿಂದ ತತ್ತರಿಸಿದ್ದ ಕಾಶಿಬಾಯಿ ಎನ್ನುವ ವಿಧವೆಗೆ ಹುಟ್ಟಿದ್ದ ಯಶವಂತನನ್ನು ದತ್ತು ಪಡೆದು ಓದಿಸಿ ಆತನನ್ನು ವೈದ್ಯನನ್ನಾಗಿ ಮಾಡಿದ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆಯವರದು.

ಜ್ಯೋತಿಬಾ ಫುಲೆಯವರ ಎಲ್ಲ ಸಮಾಜ ಸುಧಾರಣಾ ಕಾರ್ಯಗಳಿಗೆ ತೀವ್ರವಾಗಿ ಪ್ರತಿಸ್ಪಂದಿಸುತ್ತಿದ್ದ ಸಾವಿತ್ರಿಬಾಯಿ 1868ರಲ್ಲಿ ಅಸ್ಪಶ್ಯರಿಗಾಗಿ ತಮ್ಮ ಮನೆಯ ಆವರಣದಲ್ಲಿದ್ದ ಬಾವಿಯನ್ನು ಮುಕ್ತಗೊಳಿಸಿದರು. ಜ್ಯೋತಿಬಾ ಫುಲೆಯವರು ಸ್ಥಾಪಿಸಿದ್ದ ಸತ್ಯಶೋಧಕ ಸಮಾಜವನ್ನು ಅವರ ಮರಣಾನಂತರ ಸಮರ್ಥವಾಗಿ ಮುನ್ನಡೆಸಿದರು. ಸಾವಿತ್ರಿಬಾಯಿ ಫುಲೆಯವರು ದೇಸಿ ಚಿಂತನೆಯ ಸೊಗಡಿನಿಂದ ಕೂಡಿದ್ದ ಸ್ತ್ರೀವಾದಿಯಾಗಿದ್ದರು. ಅವರು ಕವಿಯಿತ್ರಿಯಾಗಿ ಹಲವಾರು ಕೃತಿ ರಚಿಸಿದ್ದರು. 1854ರಲ್ಲಿ, ‘ಕಾವ್ಯಫುಲೆ’ ಕವನ ಸಂಕಲವನ್ನು ರಚಿಸಿದ್ದರು. ಅಲ್ಲದೆ ಜ್ಯೋತಿಬಾ ಫುಲೆಯವರ ಆಯ್ದ ಭಾಷಣಗಳನ್ನು ಸಂಪಾದಿಸಿದರು ಮತ್ತು ‘ಬವನಕಾಶಿ ಸುಬೋಧ ರತ್ನಾಕರ’ವನ್ನು 1892ರಲ್ಲಿ ಪ್ರಕಟಿಸಿದ್ದರು. ಜ್ಯೋತಿಬಾ ಫುಲೆಯವರಿಗೆ ಅವರು ಬರೆದ ಮೂರು ಪತ್ರಗಳು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಆ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತವೆ. 1897ರಲ್ಲಿ ಮಹಾರಾಷ್ಟ್ರದಾದ್ಯಂತ ಪ್ಲೇಗ್ ರೋಗ ಹರಡಿಕೊಂಡಿತು. ರಾಂಡ್ ಎನ್ನುವ ಅಧಿಕಾರಿ ನೇತೃತ್ವದಲ್ಲಿ ಪ್ಲೇಗ್ ನಿಯಂತ್ರಣ ಕಾರ್ಯ ನಡೆಯುತ್ತಿತ್ತು.

ಡಾ.ಯಶವಂತನಿಗೆ ತಕ್ಷಣವೇ ಸಸಾನೆಗೆ ಬರಲು ಸಾವಿತ್ರಿಬಾಯಿ ತಿಳಿಸಿದರು. ಸಸಾನೆ ಕುಟುಂಬದ ಸ್ಥಳದಲ್ಲಿ ಆಸ್ಪತ್ರೆ ಪ್ರಾರಂಭಿಸಲು ಮಗ ಡಾ.ಯಶವಂತನಿಗೆ ಸೂಚಿಸಿದರು. ಪ್ಲೇಗ್ ಸಾಂಕ್ರಾಮಿಕ ರೋಗವೆಂದು ಗೊತ್ತಿದ್ದರೂ ಸ್ವತಃ ತಾವೇ ಪ್ಲೇಗ್ ರೋಗ ಪೀಡಿತರ ಉಪಚಾರಗೆಯ್ಯಲು ಪ್ರಾರಂಭಿಸಿದರು. ಊರ ಹೊರಗಿನ ಮಹಾರವಾಡಾದಲ್ಲಿ ಪಾಂಡುರಂಗ ದಾಬಾಜಿ ಗಾಯಕವಾಡರ ಮಗನಿಗೆ ಪ್ಲೇಗ್ ಜಾಡ್ಯ ತಗುಲಿದ ಸುದ್ದಿ ತಿಳಿದ ತಕ್ಷಣ ತಡ ಮಾಡದೆ ಸಾವಿತ್ರಿಬಾಯಿ ಆ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಆಸ್ಪತ್ರೆಗೆ ಕರೆದ್ಯೊಯುವ ಸಂದರ್ಭದಲ್ಲಿ ಪ್ಲೇಗ್ ವೈರಾಣುಗಳ ಸೊಂಕಿಗೆ ಬಲಿಯಾಗಬೇಕಾಯಿತು. ಪ್ಲೇಗ್‌ನಿಂದಾಗಿ 10ನೇ ಮಾರ್ಚ್ 1897ರಂದು ಅವರು ಕೊನೆಯುಸಿರೆಳೆದರು. 1848 ರಿಂದ 1897ರವರೆಗೆ ಐದು ದಶಕಗಳ ಕಾಲ ನಿರಂತರವಾಗಿ ಜನರ ಉದ್ಧಾರಕ್ಕಾಗಿ ಹೋರಾಡಿದ ಧೀರ ಮಹಿಳೆ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ.

ಪ್ರಪಂಚದ ಎಲ್ಲ ಪರಿವರ್ತನೆಗಳ ಹಿಂದೆ ಒಂದು ಹೋರಾಟವಿರುತ್ತದೆ. ಆ ಹೋರಾಟದ ಹಿಂದೆ ಒಂದು ಚೇತನಶಕ್ತಿ ಇರುತ್ತದೆ. ಆ ಚೇತನ ಶಕ್ತಿಯು ಸ್ವತಂತ್ರವಾಗಿ ಆಲೋಚಿಸುವಂತಹದ್ದು. ತಾನು ತುಳಿಯುವ ದಾರಿ ಎಷ್ಟೇ ದುರ್ಗಮವಾಗಿದ್ದರೂ ಅದನ್ನು ಛಲದಿಂದ ತ್ರಿವಿಕ್ರಮನಂತೆ ಬೇಧಿಸುವುದು. ಇತರರಿಗೆ ಮಾರ್ಗ ತೋರಿಸುವುದು ಮತ್ತು ತನ್ನೆಲ್ಲಾ ಪ್ರಯತ್ನಗಳಿಗೆ ಬಲವಾದ ಸ್ವಂತಿಕೆ ಮತ್ತು ಸ್ವಾಭಿಮಾನದ ಮೂಲಕ ಹೊಸತನ್ನು ನೀಡಲು ಹವಣಿಸುವುದು. ಸಾವಿತ್ರಿಬಾಯಿ ಅಂತಹ ಸ್ವಾಭಿಮಾನಿ ಹೋರಾಟಗಾರ್ತಿಯಾಗಿದ್ದರು. ಸಮಾಜದಲ್ಲಿ ಬೇರುಬಿಟ್ಟ ರೂಢಿಗತ ಸಂಪ್ರದಾಯಶೀಲ ಸಾಮಾಜಿಕ ಪರಂಪರೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ದೃಢಸಂಕಲ್ಪ, ಸ್ವಂತಿಕೆ, ಸ್ವತಂತ್ರ ಚಿಂತನೆ ಹಾಗೂ ಪರಿವರ್ತನೆಯ ಮನೋಭಾವ ಸಾವಿತ್ರಿಬಾಯಿಯವರಲ್ಲಿ ಇದ್ದವು. ಅಂತೆಯೇ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಕ್ರಾಂತಿ ಜ್ಯೋತಿ ಶಿಕ್ಷಕಿಯಾಗಿರುವರು.

Writer - ಸದಾಶಿವ ಮರ್ಜಿ, ಧಾರವಾಡ

contributor

Editor - ಸದಾಶಿವ ಮರ್ಜಿ, ಧಾರವಾಡ

contributor

Similar News