×
Ad

ಹಾರೋಬೆಲೆ ಏಸುಕ್ರಿಸ್ತನ ಪ್ರತಿಮೆ ವಿಚಾರದಲ್ಲಿ ಅನಗತ್ಯ ರಾಜಕೀಯ ಸಲ್ಲ: ಚಿಂತಕರಿಂದ ಮನವಿ

Update: 2020-01-03 12:07 IST

ಬೆಂಗಳೂರು, ಜ.3: ಕನಕಪುರದ ಹಾರೋಬೆಲೆ ಬಳಿ ಏಸುಕ್ರಿಸ್ತರ ಬೃಹತ್ ಪ್ರತಿಮೆ ನಿರ್ಮಾಣದಲ್ಲಿ ಸ್ಥಳೀಯ ಶಾಸಕರು ಕೈಜೋಡಿಸಿರುವುದು ರಾಜಕೀಯ ವಲಯದಲ್ಲಿ ಇದೀಗ ಅನೇಕ ವಾದ-ವಿವಾದಗಳಿಗೆ ಕಾರಣವಾಗಿದೆ. ಆದರೆ ಒಬ್ಬ ಜನಪ್ರತಿನಿಧಿ ತನ್ನ ಕ್ಷೇತ್ರದಲ್ಲಿನ ಸರ್ವಜನರ ಆಶೋತ್ತರಗಳಿಗೆ ಸ್ಪಂದಿಸುವುದು ಅವರ ಕರ್ತವ್ಯ. ಇದು ನಿಜವಾದ ಧರ್ಮನಿರಪೇಕ್ಷ ನಡಿಗೆಯಾಗಿದೆ ಎಂದು ಸಾಹಿತಿ, ಚಿಂತಕರಾದ ದೇವನೂರ ಮಹಾದೇವ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದ ರಾವ್, ಡಾ.ನಟರಾಜ್ ಹುಳಿಯಾರ್, ಡಾ.ಬಂಜಗೆರೆ ಜಯಪ್ರಕಾಶ್, ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಂಜುನಾಥ ಅದ್ದೆ, ಡಾ.ರವಿಕುಮಾರ್ ಬಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭಾರತ ಸರ್ವ ಧರ್ಮಗಳನ್ನು, ಜಾತಿಗಳನ್ನು ಒಳಗೊಂಡಿರುವ ಧರ್ಮಾತೀತ, ಜಾತ್ಯತೀತ ರಾಷ್ಟ್ರ. ಹಾಗಿರುವಾಗ ಇಲ್ಲಿರುವ ಎಲ್ಲ ಧರ್ಮೀಯರ ಭಾವನೆಗಳನ್ನು ಗೌರವಿಸಬೇಕಿದೆ. ಆದರೆ ಬಿಜೆಪಿ ಮುಖಂಡರು ಏಸುಕ್ರಿಸ್ತರ ಪ್ರತಿಮೆಯ ವಿಚಾರದಲ್ಲಿ ಅನಗತ್ಯವಾಗಿ ಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಅಲ್ಲದೆ ಈ ನೆಪದಲ್ಲಿ ಸೌಹಾರ್ದಯುತವಾಗಿ ಬದುಕುತ್ತಿರುವ ಅಮಾಯಕ ಜನರಲ್ಲಿ ಕೋಮುದ್ವೇಷ ಹರಡಲು ಮುಂದಾಗುತ್ತಿದ್ದಾರೆ. ಇದು ಖಂಡನೀಯ ಎಂದು ಚಿಂತಕರ ಪ್ರಕಟನೆ ತಿಳಿಸಿದೆ.

ಬಿಜೆಪಿ ಹೇಳುವಂತೆ ಹಾರೋಬೆಲೆಯಲ್ಲಿರುವುದು ಕಾಪಾಲಿಕರ ಬೆಟ್ಟ, ಅಲ್ಲಿ ಭೈರವನ ಪ್ರತಿಮೆ ಸ್ಥಾಪಿಸಬೇಕು ಎನ್ನುತ್ತಿದ್ದಾರೆ. ಅವರ ಆಗ್ರಹದಂತೆ ಅಲ್ಲಿ ಭೈರವನ ಪ್ರತಿಮೆ ನಿರ್ಮಾಣವಾಗಲಿ. ಇದಕ್ಕೆ ಯಾರು ಅಡ್ಡಿಪಡಿಸಲಾರರು. ಎಲ್ಲ ರೀತಿಯ ಧರ್ಮಗಳ, ಸಂಸ್ಕೃತಿಗಳ ಸಮಾಗಮದಲ್ಲೇ ಭಾರತದ ಬಹುತ್ವದ ಸೊಗಸು ಅಡಗಿದೆ. ಇದನ್ನು ಅರಿಯದೆ ಜಗತ್ತಿಗೆ ಶಾಂತಿ ಬೋಧಿಸಿದ ಏಸುವಿನ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವುದು ಸರ್ವಧರ್ಮ ಸಹಿಷ್ಣುತೆ ವಿರೋಧಿಯಾಗಿದೆ. ಆದ್ದರಿಂದ ಸರಕಾರ ಹಾಗೂ ಹಸ್ತಕ್ಷೇಪ ಮಾಡುತ್ತಿರುವ ರಾಕಾರಣಿಗಳು ಅನಗತ್ಯ ಕ್ಷುಲ್ಲಕ ಕೆಸರೆರಚಾಟವನ್ನು ಕೈಬಿಟ್ಟು ಒಮ್ಮತದಿಂದ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಬೇಕು. ಆ ಮೂಲಕ ಕನ್ನಡ ನಾಡು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News