×
Ad

ಪ್ರಧಾನಿ ಮೋದಿಯಿಂದ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ: ಸಿದ್ದರಾಮಯ್ಯ

Update: 2020-01-03 12:27 IST

ಬೆಂಗಳೂರು, ಜ.3: ರಾಜ್ಯದಲ್ಲಿ ಈ ಬಾರಿ ಕಂಡು ಕೇಳರಿಯದ ಪ್ರವಾಹ ಬಂದಿತ್ತು. ಆದರೆ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ಟ್ವೀಟ್ ಮಾಡುವ ಅವರು ಕನಿಷ್ಠ ಟ್ವೀಟ್ ಮೂಲಕ ಕೂಡಾ ಸಾಂತ್ವನ ಹೇಳಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬಹಳ ದಿನಗಳ ಬಳಿಕ ಕರ್ನಾಟಕಕ್ಕೆ ಬಂದಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಪ್ರಧಾನಿಗಳ ಆಗಮನಕ್ಕೆ ನಾವು ಸ್ವಾಗತ ಕೋರುತ್ತೇವೆ ಎಂದರು.

ಮೋದಿ ದೇಶದ 130 ಕೋಟಿ ಜನರ ಪ್ರಧಾನ ಮಂತ್ರಿ. ದೇಶದ ಜನರ ಕಷ್ಟ ಆಲಿಸಬೇಕಾದ್ದು ಅವರ ಕರ್ತವ್ಯ. ಆದರೆ ಈ ವಿಚಾರದಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಈ ಬಾರಿ ಪ್ರವಾಹದಿಂದ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ 38 ಸಾವಿರ ಕೋಟಿ ರೂ. ನಷ್ಟದ ವರದಿ ಕಳುಹಿಸಿತ್ತು. ಆದರೆ ಕೇಂದ್ರ ಸರಕರಾ ಆಗ ಕೊಟ್ಟಿದ್ದು ಕೇವಲ 1,200 ಕೋಟಿ ರೂ. ಮಾತ್ರ ಎಂದರು.

ಸೆಪ್ಟಂಬರ್‌ನಲ್ಲಿ ಚಂದ್ರಯಾನ-2 ವೀಕ್ಷಣೆಗೆಂದು ಪ್ರಧಾನಿ ರಾಜ್ಯಕ್ಕೆ ಬಂದರೂ ಯಾರ ಭೇಟಿಗೂ ಅವಕಾಶ ನೀಡಲಿಲ್ಲ. ಪ್ರವಾಹದ ಬಗ್ಗೆ ಸೌಜನ್ಯಕ್ಕಾದರೂ ಮಾತನಾಡಬಹುದಿತ್ತು. ಆದರೆ ಅವರು ಮಾತನಾಡಲೇ ಇಲ್ಲ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಂತೆ ಕರ್ನಾಟಕದಲ್ಲೂ ಅದೇ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಆದರೆ, ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಮನೆಯ ಬಾಗಿಲನ್ನೇ ತೆರೆಯಲಿಲ್ಲ. ಮೋದಿ ಬಳಿ ಏನನ್ನೂ ಕೇಳಲು ಬಿಜೆಪಿ ನಾಯಕರು ಭಯ ಬೀಳುತ್ತಾರೆ. ಅದಕ್ಕೆ ಯಡಿಯೂರಪ್ಪ ದುರ್ಬಲ ಸಿಎಂ ಎಂದು ನಾನು ಹೇಳಿದ್ದೆ ಎಂದು ಸಿದ್ದರಾಮಯ್ಯ ನುಡಿದರು.

ನಿನ್ನೆ ತುಮಕೂರಿನಲ್ಲಿ ಯಡಿಯೂರಪ್ಪ ಪರಿಹಾರಕ್ಕಾಗಿ ಪ್ರಧಾನಿ ಮೋದಿಯ ಗೋಗರೆದಿದ್ದಾರೆ. ಆದರೆ ಇದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕನಿಷ್ಠಪಕ್ಷ ಪರಿಶೀಲಿಸುತ್ತೇನೆ ಅಂತಲಾದ್ರೂ ಹೇಳಬಹುದಾಗಿತ್ತು. ಅದೂ ಇಲ್ಲ. ಇದನ್ನೆಲ್ಲಾ ಗಮನಿಸಿದರೆ ಮೋದಿಗೆ ಕರ್ನಾಟಕದ ಬಗ್ಗೆ ಎಷ್ಟು ನಿರ್ಲಕ್ಷ್ಯ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಿದ್ದರಾಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News