ಸಿಎಎ-ಎನ್‌ಆರ್‌ಸಿ ವಿರುದ್ಧ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ: ಸಾಗರೋಪಾದಿಯಲ್ಲಿ ಜಮಾಯಿಸಿದ ಜನ
ಬೆಂಗಳೂರು, ಜ.3: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ರಾಜಧಾನಿ ಬೆಂಗಳೂರಿನ ಆಲ್ ಮಜ್ಜಿದ್ ಕಮಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಇಲ್ಲಿನ ಮೈಸೂರು ರಸ್ತೆಯ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಡೆದ ‘ಭಾರತ ಉಳಿಸಿ, ಸಂವಿಧಾನ ರಕ್ಷಿಸಿ’ ಪ್ರತಿಭಟನೆಯಲ್ಲಿ ಜನರ ದಂಡು ಸಾಗರೋಪಾದಿಯಲ್ಲಿ ಹರಿದುಬಂದಿತು.
ತಮ್ಮ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ ಸಾವಿರಾರು ಪ್ರತಿಭಟನಾಕಾರರು, ಮಧ್ಯಾಹ್ನ 2ಗಂಟೆ ಸುಮಾರಿಗೆ ಮೈದಾನಕ್ಕೆ ಜಮಾಯಿಸಿದರು. ಸುಡು ಬಿಸಿಲಿನಲ್ಲಿಯೇ ಧರ್ಮಗುರುಗಳ, ಹೋರಾಟಗಾರರ ಮಾತುಗಳಿಗೆ ಜೈಕಾರ ಕೂಗಿದ ದೃಶ್ಯಗಳು ಕಂಡುಬಂದವು.
ಕೇಂದ್ರ ಸರಕಾರ ಜಾರಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆ ನೋಡಿದರೆ ಭಾರತದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಕಾಯ್ದೆ ಜಾರಿ ಮಾಡುತ್ತಿರುವ ಕೇಂದ್ರ ಸರಕಾರ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳ ಮುಸ್ಲಿಮೇತರರ ಬಗ್ಗೆ ಕಾಳಜಿ ವಹಿಸುತ್ತಿದೆ. ಇದರ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಹುನ್ನಾರವಿದೆ. ಇದರಿಂದ ದೇಶಕ್ಕೆ ಗಂಡಾಂತರವಿದೆ ಎಂದರು.
ಬಿಗಿ ಬಂದೋಬಸ್ತ್: ಇಲ್ಲಿನ ಚಾಮರಾಜಪೇಟೆ ವ್ಯಾಪ್ತಿಯ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲಾಗಿತ್ತು.
ಸಂಚಾರ ದಟ್ಟಣೆ: ಈದ್ಗಾ ಮೈದಾನದಲ್ಲಿ ಮಧ್ಯಾಹ್ನದ ಸುಮಾರಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದ ಪರಿಣಾಮ, ಮೈಸೂರು ರಸ್ತೆ, ಬಾಲಗಂಗಾಧರನಾಥ ಮೇಲ್ಸುತುವೆ ಮಾರ್ಗ, ಕೆಆರ್ ಮಾರ್ಕೆಟ್ ರಸ್ತೆ, ಹಳೇ ಗುಡ್ಡದಹಳ್ಳಿ ಮಾರ್ಗ ಸೇರಿದಂತೆ ನಾನಾ ಕಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಮೊಳಗಿದ ರಾಷ್ಟ್ರಗೀತೆ...
ಸರ್ವ ಸಮಾಜಗಳ ಒಕ್ಕೂಟದ ಹೆಸರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಮೊಳಗಿತು. ಬಹಿರಂಗ ಸಭೆ ಆರಂಭಿಸುವ ಮೊದಲು ಎಲ್ಲರೂ ಸಾಮೂಹಿಕವಾಗಿ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರು. ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. ಪ್ರತಿಭಟನಾಕಾರರಲ್ಲಿ ಅನೇಕರ ಭುಜದಲ್ಲಿ ಕಪ್ಪುಪಟ್ಟಿ ಮತ್ತು ಕೈಯಲ್ಲಿ ಕಪ್ಪುಬಾವುಟ ಕಾಣಿಸಿತು.
‘ನಮ್ಮದು ರಾಜ್ಯಾಂಗ ದೇಶ’
ಜಾತಿ, ಧರ್ಮದ ಮೇಲೆ ಪಾಕಿಸ್ತಾನ ರಚನೆಯಾದರೆ, ನಮ್ಮದು ರಾಜ್ಯಾಂಗದ ಆಧಾರದ ಮೇಲೆ ರಚಿಸಿದ ದೇಶವಾಗಿದೆ. ಅಲ್ಲದೆ, ಈ ದೇಶದ ಸ್ವಾತಂತ್ರಕ್ಕಾಗಿ ಎಲ್ಲ ವರ್ಗದವರು ಪ್ರಾಣ ಕೊಟ್ಟಿದ್ದಾರೆ. ಈಗ, ಪೌರತ್ವ ನೆಪದಲ್ಲಿ ಹಿಂಸೆ ನೀಡುವುದು, ಭಾರತೀಯರನ್ನು ಪ್ರಶ್ನಿಸುವ ಪ್ರಮಾದ ಬೇಡ.
-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ