ಭಾರತದ ಬೆಳವಣಿಗೆ ವಿಜ್ಞಾನ-ತಂತ್ರಜ್ಞಾನದ ಸಾಧನೆಯನ್ನು ಅವಲಂಬಿಸಿದೆ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ
ಬೆಂಗಳೂರು, ಜ.3: ಭಾರತದ ಬೆಳವಣಿಗೆಯು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯನ್ನು ಅವಲಂಬಿಸಿದೆ. ಆದುದರಿಂದ, ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಶುಕ್ರವಾರ ನಗರದ ಜಿ.ಕೆ.ವಿ.ಕೆಯಲ್ಲಿ ಆಯೋಜಿಸಲಾಗಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆವಿಷ್ಕಾರ, ಸ್ವಾಮ್ಯ, ಉತ್ಪಾದನೆ ಹಾಗೂ ಏಳಿಗೆ(ಇನ್ನೋವೇಟ್, ಪೆಟೆಂಟ್, ಪ್ರೊಡ್ಯೂಸ್ ಹಾಗೂ ಪ್ರಾಸ್ಪರ್) ಯುವ ವಿಜ್ಞಾನಿಗಳ ಪಾಲಿಗೆ ಮೂಲ ಮಂತ್ರವಾಗಬೇಕು ಎಂದರು. ಈ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ನಡೆದರೆ ಭಾರತವು ಕ್ಷಿಪ್ರಗತಿಯ ಬೆಳವಣಿಗೆಯ ಕ್ಷೇತ್ರದಲ್ಲಿ ಮುಂಚೂಣಿಗೆ ಬರುತ್ತದೆ. ನವ ಭಾರತ(ನ್ಯೂ ಇಂಡಿಯಾ)ಕ್ಕಾಗಿ ಆವಿಷ್ಕಾರಗಳು ಜನರಿಂದ ಹಾಗೂ ಜನರಿಂದ ಜನರಿಗಾಗಿ ಹಾದಿಯಲ್ಲಿ ಮುಂದುವರೆಯಬೇಕು ಎಂದು ಅವರು ಹೇಳಿದರು.
ತಂತ್ರಜ್ಞಾನ ಹಾಗೂ ತಾರ್ಕಿಕ ಮನೋಧರ್ಮವನ್ನು ನ್ಯೂ ಇಂಡಿಯಾ ಬಯಸುತ್ತದೆ. ಇದರಿಂದಾಗಿ ನಾವು ನಮ್ಮ ಸಮಾಜ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲು ಸಾಧ್ಯವಾಗುತ್ತದೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯಿಂದಾಗಿ ದೇಶದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಹಾಗೂ ಡೇಟಾವನ್ನು ಬಳಸಲು ಸಾಧ್ಯವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಾಮಾನ್ಯ ಮನುಷ್ಯನು, ಸರಕಾರದ ಜೊತೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದ ಸಹಕಾರದಿಂದ ಮಾತ್ರ ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ವರ್ಷದಲ್ಲಿ ನನ್ನ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರೋದು ಖುಷಿ ತಂದಿದೆ. ಬೆಂಗಳೂರು ಮೊದಲು ಗಾರ್ಡನ್ ಸಿಟಿ (ಉದ್ಯಾನ ನಗರಿ) ಆಗಿತ್ತು. ಆದರೆ, ಈಗ ಸ್ಟಾರ್ಟ್ ಅಪ್(ನವೋದ್ಯಮ)ಗಳ ನಗರವಾಗಿ ಬದಲಾಗಿದೆ ಎಂದು ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನಿನ್ನೆಯಷ್ಟೇ ದೇಶದ 6 ಕೋಟಿ ರೈತ ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಆಧಾರ್ ವ್ಯವಸ್ಥೆಯಿಂದಾಗಿ ಇದು ಸಾಧ್ಯವಾಯಿತು. ಜೊತೆಗೆ ತಂತ್ರಜ್ಞಾನವು ಶೌಚಾಲಯಗಳ ನಿರ್ಮಾಣ, ಬಡವರಿಗೆ ವಿದ್ಯುಚ್ಛಕ್ತಿ ಪೂರೈಕೆ ಮಾಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ನವೀನ ಆವಿಷ್ಕಾರಗಳಲ್ಲಿ ಭಾರತವು ಗಣನೀಯ ಸಾಧಣೆ ಮಾಡಿದೆ. ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಕೆ ಮಾಡುವಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಡಿಜಿಟಲ್ ಟೆಕ್ನಾಲಜಿ, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ವ್ಯಾಪಕವಾಗಿ ವಿಸ್ತಾರವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ನಗರ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ತಂತ್ರಜ್ಞಾನ ಹೆಚ್ಚಿನ ಬಳಕೆಯಾಗಬೇಕಿದೆ. ಕಳೆದ ಐದು ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಮಹತ್ವದ ಪ್ರಗತಿಯನ್ನು ಸಾಧಿಸಿದೆ. ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ ಹೊಸ ತಂತ್ರಜ್ಞಾನದ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು.
2022ರ ವೇಳೆಗೆ ನಾವು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾತೈಲದ ಪ್ರಮಾಣವನ್ನು ಶೇ.10ರಷ್ಟು ಕಡಿಮೆ ಮಾಡಬೇಕಿದೆ. ಅಂತರ್ಜಲ ಸಂರಕ್ಷಣೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗಾಗಿ ಪರಿಹಾರ ಹುಡುಕಬೇಕಿದೆ ಎಂದು ನರೇಂದ್ರ ಮೋದಿ ಹೇಳಿದರು.
ಭಾರತವನ್ನು ಐದು ಟ್ರಿಲಿಯನ್ ಆರ್ಥಿಕತೆಯತ್ತ ಸಾಗಿಸಲು ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಅಲ್ಲದೇ, ಇದೇ ವೇಳೆ ಅವರು ಐ-ಎಸ್‌ಟಿಇಎಂ ಪೋರ್ಟಲ್‌ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.