×
Ad

ಬಿಜೆಪಿ ಬ್ರಿಟಿಷ್, ಹಿಟ್ಲರ್ ನೀತಿ ಅನುಸರಿಸುತ್ತಿದೆ: ವಿ.ಎಸ್.ಉಗ್ರಪ್ಪ

Update: 2020-01-03 19:58 IST

ಬೆಂಗಳೂರು, ಜ.3: ಭಾರತದಲ್ಲಿ ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿ ಹಾಗೂ ಹಿಟ್ಲರ್‌ನ ಜನಾಂಗ ಹತ್ಯೆಯ ಮಾದರಿಯಲ್ಲಿ ಬಿಜೆಪಿ ದೇಶವನ್ನು ಧರ್ಮಾಧಾರಿತವಾಗಿ ಒಡೆಯಲು ಮುಂದಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಹಿಂದೂಗಳ ವಿರುದ್ದ ಮುಸ್ಲಿಮರನ್ನು ಎತ್ತಿ ಕಟ್ಟುತ್ತಲೇ ಆಡಳಿತ ನಡೆಸಿದರು. ಇದನ್ನು ಬಿಜೆಪಿ ಮುಂದುವರೆಸುತ್ತಿದೆ. ಹಾಗೆಯೇ ಜರ್ಮನಿಯಲ್ಲಿ ಹಿಟ್ಲರ್ ಲಕ್ಷಾಂತರ ಯಹೂದಿಗಳನ್ನು ಹತ್ಯೆ ಮಾಡಿದನು. ಆತನ ಪ್ರವೃತ್ತಿಯನ್ನು ಬಿಜೆಪಿ ನಾಯಕರು ಅನುಸರಿಸಲು ಮುಂದಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದ ಹುಟ್ಟಿದ ಭಾರತವು ಇಡೀ ವಿಶ್ವವನ್ನೇ ಕುಟುಂಬದ ರೀತಿಯಲ್ಲಿ ನೋಡಬೇಕೆಂಬ ತತ್ವದ ಆಧಾರದಲ್ಲಿ ನಿರ್ಮಾಣಗೊಂಡಿದೆ. ಆದರೆ, ಬಿಜೆಪಿ ದೇಶದ ಮೂಲ ಸಾರವಾದ ಸಮಾನತೆ, ಸಹೋದರತೆ ಹಾಗೂ ಮಾನವೀಯ ಮೌಲ್ಯಗಳನ್ನು ನಿರ್ಮೂಲನೆ ಮಾಡುವ ದುರುದ್ದೇಶದಿಂದಲೇ ದೇಶದಲ್ಲಿ ಜನವಿರೋಧಿ ಕಾನೂನು ರೂಪಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಪಾಕ್ ಏಜೆಂಟ್: ಸ್ವಾತಂತ್ರ ನಂತರದ ಭಾರತದಲ್ಲಿ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆಯೆಂದರೆ ಅದು ಕಾಂಗ್ರೆಸ್ ಮಾತ್ರ. ಇಂದಿರಾಗಾಂಧಿ ಪಾಕಿಸ್ತಾನದ ಎದುರಿಗೆ ಎರಡು-ಮೂರು ಭಾರಿ ಯುದ್ಧ ಮಾಡುವ ಮೂಲಕ ದಿಟ್ಟ ಉತ್ತರವನ್ನು ನೀಡಿದ್ದನ್ನು ಅಟಲ್‌ ಬಿಹಾರಿ ವಾಜಪೇಯಿ ಶ್ಲಾಘಿಸಿದ್ದರು. ಪೂರ್ವ ಪಾಕಿಸ್ತಾನ ಇವತ್ತು ಬಾಂಗ್ಲಾದೇಶ ಆಗಿರುವುದಕ್ಕೆ ಕಾಂಗ್ರೆಸ್‌ನ ದಿಟ್ಟ ನಿಲುವೇ ಕಾರಣ. ಈಗಿನ ಪ್ರಧಾನಿ ನರೇಂದ್ರ ಮೋದಿಗೆ ತಾಕತ್ತು, ದಮ್ಮು ಇದ್ದರೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ, ಅಲ್ಲಿನ ಅಲ್ಪಸಂಖ್ಯಾತರ ಹಿತವನ್ನು ಕಾಯುವುದಕ್ಕೆ ಸಾಧ್ಯವೇ ಎಂದು ಅವರು ಸವಾಲು ಹಾಕಿದರು.

ಅಟಲ್‌ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನಕ್ಕೆ ಬಸ್ ಸಂಚಾರ ಕಲ್ಪಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಯಾವತ್ತೂ ಭಾರತಕ್ಕೆ ಸಮಸ್ಯೆಯಾಗುವಂತಹ ರೀತಿಯಲ್ಲಿ ಪಾಕಿಸ್ತಾನಕ್ಕೆ ಸಹಕಾರ ನೀಡಿಲ್ಲವೆಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಪ್‌ಗೆ ಬಿರಿಯಾನಿ ಕಳುಹಿಸಿ ಕೊಡುತ್ತಾರೆ. ಗುಪ್ತವಾಗಿ ಪಾಕಿಸ್ತಾನಕ್ಕೆ ಹೋಗಿ ಬರುತ್ತಾರೆ. ಇಂತಹ ದೇಶ ವಿರೋಧಿ ನೀತಿಯನ್ನು ಅನುಸರಿಸುವ ಬಿಜೆಪಿ, ತಾನು ಮಾಡುವ ದೇಶ ವಿರೋಧಿ ಚಟುವಟಿಕೆಗಳನ್ನು ಕಾಂಗ್ರೆಸ್ ಮೇಲೆ ಹಾಕುವಂತಹ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇಡೀ ವಿಶ್ವದಲ್ಲಿಯೇ ಕೋಮುಸಾಮರಸ್ಯ, ವಿದ್ಯಾರ್ಜನೆಗೆ ಹೆಸರಾಗಿರುವ ಸಿದ್ಧಲಿಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟು, ಅಲ್ಲಿನ ವಿದ್ಯಾರ್ಥಿಗಳ ಎದುರಿಗೆ ಸಿಎಎ ಹಾಗೂ ಪಾಕಿಸ್ತಾನದ ವಿರುದ್ಧ ಭಾಷಣ ಮಾಡುವ ಮೂಲಕ ಅಲ್ಲಿನ ನೆಲವನ್ನು ಅಪವಿತ್ರಗೊಳಿಸಿದ್ದಾರೆ.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News