ಕನ್ನಡ ಬೋಧಿಸದ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

Update: 2020-01-03 15:00 GMT

ಬೆಂಗಳೂರು, ಜ.3: ರಾಜ್ಯದಲ್ಲಿ ಕಡ್ಡಾಯ ಕನ್ನಡ ಬೋಧಿಸದ ಯಾವುದೇ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಅನುಷ್ಠಾನ ಕುರಿತಂತೆ ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿಎಸ್‌ಇ, ಅಂತರ್‌ರಾಷ್ಟ್ರೀಯ ಪಠ್ಯ ಬೋಧನಾ ಕ್ರಮದ ಶಾಲೆಗಳು ಸೇರಿದಂತೆ ಕೇಂದ್ರೀಯ ವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಕನ್ನಡ ಉಪಾಧ್ಯಾಯರ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದನ್ವಯ ಕನ್ನಡ ಬೋಧಿಸಲೇಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಧಿನಿಯಮ 2015ರಲ್ಲೇ ಜಾರಿಯಾಗಿದ್ದರೂ 2017-18ರಿಂದ ಕಟ್ಟುನಿಟ್ಟಾಗಿ ಎಲ್ಲ ಶಾಲೆಗಳೂ ಅನುಷ್ಠಾನಗೊಳಿಸಬೇಕಿತ್ತು. ಕೆಲ ಶಾಲೆಗಳು ಈವರೆಗೆ ಅದನ್ನು ಪಾಲಿಸುವ ಗೋಜಿಗೆ ಹೋಗಿಲ್ಲ. ಅಂತಹ ಶಾಲೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮುಲಾಜಿಲ್ಲದೇ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನ್ನಡ ನೆಲದ ಯಾವುದೇ ಶಾಲೆಯಾದರೂ ಒಂದನೆ ತರಗತಿಯಿಂದ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕಲಿಸಲೇಬೇಕು. ಅದೂ ರಾಜ್ಯ ಸರಕಾರ ನಿಗದಿಪಡಿಸಿರುವ ಪಠ್ಯಪುಸ್ತಕವನ್ನೇ ಕಡ್ಡಾಯವಾಗಿ ಕಲಿಸಬೇಕು. ಈ ಪುಸ್ತಕದ ಹೊರತಾಗಿ ತಮ್ಮದೇ ಆದ ಕನ್ನಡ ಪಠ್ಯ ಬೋಧಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದನ್ನೂ ಶಾಲೆಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಕನ್ನಡ ನೆಲದಲ್ಲಿದ್ದೂ, ಕನ್ನಡ ನೆಲ ಜಲ ಬಳಸಿಕೊಂಡರೂ, ಕನ್ನಡ ಕಲಿಯದಿದ್ದರೂ ಬದುಕಬಹುದು. ಕನ್ನಡ ಕಲಿಯುವುದು ಇಲ್ಲವೇ ಮಾತನಾಡುವುದೇ ಒಂದು ದೌರ್ಬಲ್ಯ ಎಂದು ಭಾವಿಸಿದವರಿಗೇನೂ ಕೊರತೆಯಿಲ್ಲ. ಕಾವೇರಿ ನೀರು ಕುಡಿಯುವವರೆಲ್ಲರೂ, ಕನ್ನಡ ನೆಲದಲ್ಲಿ ವಾಸಿಸುವವರೆಲ್ಲರೂ ಕನ್ನಡವನ್ನು ಕಲಿಯಲೇಬೇಕು. ಅಂತಹ ಶಾಲೆಗಳು ರಾಜ್ಯದ ಕನ್ನಡ ಕಡ್ಡಾಯ ಕಲಿಕಾ ನಿಯಮದಡಿ ಅದನ್ನು ಅಕ್ಕರೆಯಿಂದಲೇ ಕಲಿಯಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಕನ್ನಡದ ಕೆಲಸಗಳು ಸರಕಾರದಿಂದ ಚೆನ್ನಾಗಿಯೇ ನಡೆದಿವೆ. ಆದರೆ ಕೊನೆ ಹಂತದಲ್ಲಿ ಜಾರಿಗೊಳಿಸುವವರು ಸರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿಲ್ಲ, ಕನ್ನಡವನ್ನು ಭಾಷೆಯನ್ನಾಗಿ ಕಲಿಸಲು ಶಾಲೆಗಳಿಗೆ ಏನು ತೊಂದರೆ ಇದೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News