ಎಲ್ಲರೂ ಸಂಯಮ ಕಾಪಾಡಿಕೊಳ್ಳಬೇಕು: ಚೀನಾ

Update: 2020-01-03 15:24 GMT

ಬೀಜಿಂಗ್, ಜ. 3: ಇರಾಕ್‌ನಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ಸೇನೆಯ ಉನ್ನತ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆಯ ಬಳಿಕ, ಸಂಬಂಧಪಟ್ಟ ಎಲ್ಲ ಪಕ್ಷಗಳು, ಅದರಲ್ಲೂ ವಿಶೇಷವಾಗಿ ಅಮೆರಿಕ ಸಂಯಮ ಕಾಪಾಡಿಕೊಳ್ಳಬೇಕು ಎಂದು ಚೀನಾ ಶುಕ್ರವಾರ ಮನವಿ ಮಾಡಿದೆ.

ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಇರಾನ್ ಪರ ಗುಂಪು ಈ ವಾರ ಮುತ್ತಿಗೆ ಹಾಕಿದ ಬಳಿಕ, ಸುಲೈಮಾನಿ ಹತ್ಯೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಕೆ ಪೆಂಟಗನ್ ತಿಳಿಸಿದೆ.

‘‘ಅಂತರ್‌ರಾಷ್ಟ್ರೀಯ ಸಂಬಂಧಗಳಲ್ಲಿ ಬಲ ಪ್ರಯೋಗಿಸುವುದನ್ನು ಚೀನಾ ಯಾವಾಗಲೂ ವಿರೋಧಿಸುತ್ತಾ ಬಂದಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘‘ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವುದನ್ನು ತಡೆಯುವುದಕ್ಕಾಗಿ ಸಂಯಮ ವಹಿಸುವಂತೆ ಹಾಗೂ ಶಾಂತವಾಗಿರುವಂತೆ ನಾವು ಸಂಬಂಧಪಟ್ಟ ಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಅಮೆರಿಕವನ್ನು ಒತ್ತಾಯಿಸುತ್ತೇವೆ’’ ಎಂದು ಗೆಂಗ್ ನುಡಿದರು.

ಇರಾಕ್‌ನ ಸಾರ್ವಭೌಮತ್ವ, ಸ್ವಾತಂತ್ರ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಾಗಿದೆ ಎಂದರು.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಚೀನಾವು ಇರಾನ್‌ನ ಪ್ರಮುಖ ಭಾಗೀದಾರನಾಗಿದೆ ಹಾಗೂ ಇರಾನ್ ತೈಲದ ಪ್ರಮುಖ ಖರೀದಿದಾರನಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News