ಮೂರನೇ ಟೆಸ್ಟ್: ಉತ್ತಮ ಮೊತ್ತದತ್ತ ಆಸ್ಟ್ರೇಲಿಯ

Update: 2020-01-04 04:19 GMT

ಸಿಡ್ನಿ, ಜ.3: ಕಳೆದ ಐದು ಪಂದ್ಯಗಳಲ್ಲಿ ನಾಲ್ಕನೇ ಶತಕ ಸಿಡಿಸಿದ ಮಾರ್ನಸ್ ಲ್ಯಾಬುಶೆನ್ ಅವರ ಸಾಹಸದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಆತಿಥೇಯ ಆಸ್ಟ್ರೇಲಿಯ ಉತ್ತಮ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಇಟ್ಟಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ(ಎಸ್‌ಸಿಜಿ)ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 283 ರನ್ ಗಳಿಸಿದೆ.

 ಪರ್ತ್ ಹಾಗೂ ಮೆಲ್ಬೋರ್ನ್‌ನಲ್ಲಿ ಭಾರೀ ಅಂತರದ ಸೋಲಿನೊಂದಿಗೆ ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ನ್ಯೂಝಿಲ್ಯಾಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್, ಬ್ಯಾಟ್ಸ್‌ಮನ್ ಹೆನ್ರಿ ನಿಕೊಲ್ಸ್ ಹಾಗೂ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅನುಪಸ್ಥಿತಿಯಲ್ಲಿ ಮೂರನೇ ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯಿತು. ಲ್ಯಾಬುಶೆನ್ ಔಟಾಗದೆ 130 ರನ್(210 ಎಸೆತ,12 ಬೌಂಡರಿ,1 ಸಿಕ್ಸರ್) ಗಳಿಸಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ನವೆಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧ 185 ಹಾಗೂ 162 ರನ್ ಗಳಿಸಿದ್ದ ಲ್ಯಾಬುಶೆನ್ ನ್ಯೂಝಿಲ್ಯಾಂಡ್ ವಿರುದ್ದ ಸರಣಿಯ ಮೊದಲ ಪಂದ್ಯದಲ್ಲಿ 143 ರನ್ ಗಳಿಸಿದ್ದರು.

25ರ ಹರೆಯದ ಲ್ಯಾಬುಶೆನ್ ಮಾಜಿ ನಾಯಕ ಸ್ಟೀವನ್ ಸ್ಮಿತ್(63, 182 ಎಸೆತ, 4 ಬೌಂಡರಿ)ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 156 ರನ್ ಸೇರಿಸಿದರು. ಶನಿವಾರ ಮ್ಯಾಥ್ಯೂ ವೇಡ್(ಔಟಾಗದೆ 22, 30 ಎಸೆತ)ಅವರೊಂದಿಗೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಥಾಮ್ ನ್ಯೂಝಿಲ್ಯಾಂಡ್‌ನ ನಾಯಕತ್ವವಹಿಸಿದ್ದರು. ಟಾಸ್ ಸೋತಿದ್ದ ನ್ಯೂಝಿಲ್ಯಾಂಡ್ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಹಿರಿಯ ವೇಗಿ ಟಿಮ್ ಸೌಥಿಯವರನ್ನು ಕೈಬಿಟ್ಟಿದೆ.

ಸೌಥಿಯ ಸಹ ಆಟಗಾರ ಟ್ರೆಂಟ್ ಬೌಲ್ಟ್ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯವನ್ನು ಆಡಿಲ್ಲ. ಕಾಲಿನ್ ಡಿ ಗ್ರಾಂಡ್‌ಹೋಮ್ ಅವರು ಮ್ಯಾಟ್ ಹೆನ್ರಿ ಜೊತೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ದಾಳಿ ಆರಂಭಿಸಿದರು. ಮೊದಲಿಗೆ ಜೋ ಬರ್ನ್ಸ್(18) ವಿಕೆಟ್ ಪಡೆದರು. ಭೋಜನ ವಿರಾಮದ ಬಳಿಕ ಡೇವಿಡ್ ವಾರ್ನರ್(45,80 ಎಸೆತ, 3 ಬೌಂಡರಿ)ವೇಗದ ಬೌಲರ್ ನೀಲ್ ವಾಗ್ನರ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ವಾಗ್ನರ್ ಈ ಸರಣಿಯಲ್ಲಿ ನಾಲ್ಕು ಇನಿಂಗ್ಸ್‌ನಲ್ಲಿ ನಾಲ್ಕು ಬಾರಿ ಸ್ಮಿತ್‌ರನ್ನು ಔಟ್ ಮಾಡಿದ್ದರು. ಸ್ಮಿತ್ ಈ ಸಲ ಐದನೇ ಬಾರಿ ವಾಗ್ನರ್‌ಗೆ ಔಟಾಗುವುದರಿಂದ ಬಚಾವಾಗಲು ಪ್ರಯತ್ನಿಸಿದರು. ಖಾತೆ ತೆರೆಯಲು 39 ಎಸೆತಗಳನ್ನು ಎದುರಿಸಿದರು. 182 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 63 ರನ್ ಗಳಿಸಿದ ಸ್ಮಿತ್ 84ನೇ ಓವರ್‌ನಲ್ಲಿ ಗ್ರಾಂಡ್‌ಹೋಮ್ ಅವರ ಎರಡನೇ ಹೊಸ ಚೆಂಡಿಗೆ ವಿಕೆಟ್ ಒಪ್ಪಿಸಿದರು. ಲ್ಯಾಬುಶೆನ್ 99 ರನ್ ಗಳಿಸಿದ್ದಾಗ ಬೌಂಡರಿ ಬಾರಿಸಿ ತನ್ನ 14ನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಬಾರಿ ಶತಕ ಪೂರೈಸಿದರು. ನ್ಯೂಝಿಲ್ಯಾಂಡ್‌ನ ಪರ ಗ್ರಾಂಡ್‌ಹೋಮ್(2-63)ಎರಡು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್

► ಆಸ್ಟ್ರೇಲಿಯ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 283/3

(ಲ್ಯಾಬುಶೆನ್ ಔಟಾಗದೆ 130, ಸ್ಟೀವನ್ ಸ್ಮಿತ್ 63, ಡೇವಿಡ್ ವಾರ್ನರ್ 45, ವೇಡ್ ಔಟಾಗದೆ 22, ಗ್ರಾಂಡ್‌ಹೋಮ್ 2-63, ವಾಗ್ನರ್ 1-48)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News