'ಕಾರಿಗೆ ಇಂಧನ ನೀಡಲ್ಲ' ಎಂದ ಸಹಕಾರಿ ಸಂಘ: ಸಂಪುಟ ಸಭೆಗೆ ಬಸ್ಸಿನಲ್ಲಿ ತೆರಳಿದ ಸಚಿವ!

Update: 2020-01-04 10:09 GMT

ಪುದುಚೇರಿ: ತಮ್ಮ ವಾಹನಕ್ಕೆ ಇಂಧನ ಪೂರೈಸಲು ಸಹಕಾರಿ ಸಂಘ ನಿರಾಕರಿಸಿದ ನಂತರ ತನ್ನ ಕಾರನ್ನು ತೊರೆದು ಸಚಿವರೊಬ್ಬರು ಬಸ್ಸಿನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ.

ಪುದುಚೇರಿಯ ಕೃಷಿ ಸಚಿವ ಆರ್. ಕಮಲಕಣ್ಣನ್ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರ ಕಾರಿಗೆ ಇಂಧನ ಪೂರೈಸಲು ಸಹಕಾರಿ ಸಂಘ ನಿರಾಕರಿಸಿತ್ತು. ಸಹಕಾರಿ ಸೂಪರ್ ಮಾರ್ಕೆಟ್ 'ಅಮುಧಸುರಭಿ'ಗೆ ಕಳೆದ ಐದು ವರ್ಷಗಳಿಂದ ಸರಕಾರಿ ಇಲಾಖೆಗಳು ಹಾಗೂ ಸಚಿವ ಸಂಪುಟ ಕಚೇರಿಯ ಇಂಧನ ಕುರಿತಾದ  ಬಾಕಿಗಳು ಚುಕ್ತಾ ಆಗಿಲ್ಲದೇ ಇದ್ದುದರಿಂದ ಸಚಿವರ ವಾಹನಕ್ಕೆ ಅದು ಇಂಧನ ಪೂರೈಸಿಲ್ಲವೆನ್ನಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಸೂಪರ್ ಮಾರ್ಕೆಟ್ ಆರು ತಿಂಗಳುಗಳಿಂದ ತನ್ನ ಉದ್ಯೋಗಿಗಳಿಗೆ ವೇತನ ಮತ್ತಿತರ ಭತ್ತೆಗಳನ್ನೂ ನೀಡಿಲ್ಲ.

ಇದೇ ಕಾರಣದಿಂದ ಜನವರಿ 2ರಿಂದ ಸರಕಾರಿ ಇಲಾಖೆಗಳ ಹಾಗೂ ಸಚಿವರ ವಾಹನಗಳಿಗೆ ಇಂಧನ ಪೂರೈಸದೇ ಇರಲು ಅದು ನಿರ್ಧರಿಸಿತ್ತು.

ಶುಕ್ರವಾರ ಸಚಿವರ ಚಾಲಕ ಡೀಸೆಲ್ ತುಂಬಿಸಲೆಂದು ಕರೈಕಲ್ ಘಟಕಕ್ಕೆ ಕಾರನ್ನು ಕೊಂಡು ಹೋದಾಗ ಅಲ್ಲಿನ ಸಿಬ್ಬಂದಿ ಇಂಧನ ಪೂರೈಕೆಗೆ ನಿರಾಕರಿಸಿದ್ದರಿಂದ ಸಚಿವರು ಬಸ್ಸಿನಲ್ಲಿ ಪ್ರಯಾಣಿಸಿದರು. ಸರಕಾರಿ ಇಲಾಖೆಗಳು ಸಂಸ್ಥೆಗೆ ರೂ 2.5 ಕೋಟಿ ಬಾಕಿಯಿರಿಸಿವೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News