ವೃತ್ತಿಪರ ಕ್ರಿಕೆಟ್‌ಗೆ ಇರ್ಫಾನ್ ಪಠಾಣ್ ವಿದಾಯ

Update: 2020-01-05 05:29 GMT

     ಹೊಸದಿಲ್ಲಿ, ಜ.4: ಭಾರತದ ಶ್ರೇಷ್ಠ ಆಲ್‌ರೌಂಡರ್ ಇರ್ಫಾನ್ ಪಠಾಣ್ ತನ್ನ 17 ವರ್ಷಗಳ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 35ರ ಹರೆಯದ ಇರ್ಫಾನ್ 2019ರ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪರವಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೊನೆಯ ಸ್ಪರ್ಧಾತ್ಮಕ ಪಂದ್ಯ ಆಡಿದ್ದರು. 2012ರ ಅಕ್ಟೋಬರ್‌ನಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು.

2003ರಲ್ಲಿ ಆಸ್ಟ್ರೇಲಿಯದ ವಿರುದ್ಧ ಅಡಿಲೇಡ್ ಓವಲ್‌ನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ ಎಡಗೈ ಸ್ವಿಂಗ್ ಬೌಲರ್ ಪಠಾಣ್ 2004ರ ಜನವರಿಯಲ್ಲಿ ಸಿಡ್ನಿಯಲ್ಲಿ ತನ್ನ ರಿವರ್ಸ್ ಸ್ವಿಂಗ್ ಎಸೆತದ ಮೂಲಕ ಸ್ಟೀವ್ ವಾ ಹಾಗೂ ಆ್ಯಡಮ್ ಗಿಲ್‌ಕ್ರಿಸ್ಟ್ ವಿಕೆಟ್ ಪಡೆಯುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಮೂರು ವರ್ಷಗಳ ಬಳಿಕ ಭಾರತ ತಂಡ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಜಯಿಸಲು ಪ್ರಮುಖ ಕಾಣಿಕೆ ನೀಡಿದರು.

2003ರಲ್ಲಿ ಲಾಹೋರ್‌ನಲ್ಲಿ ನಡೆದಿದ್ದ ಅಂಡರ್-19 ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 16 ರನ್‌ಗೆ 9 ವಿಕೆಟ್‌ಗಳನ್ನು ಉರುಳಿಸುವುದರೊಂದಿಗೆ ಆಯ್ಕೆಗಾರರ ಗಮನಸೆಳೆದಿದ್ದರು. 2004ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. 2003-04ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು.

  ಇರ್ಫಾನ್ 29 ಟೆಸ್ಟ್‌ನಲ್ಲಿ 1,105 ರನ್ ಹಾಗೂ 100 ವಿಕೆಟ್, 120 ಏಕದಿನದಲ್ಲಿ 1,544 ರನ್ ಹಾಗೂ 173 ವಿಕೆಟ್ ಹಾಗೂ 24 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 172 ರನ್ ಹಾಗೂ 28 ವಿಕೆಟ್ ಗಳಿಸಿದ್ದರು.

 2012ರಲ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಕೊನೆಯ ಬಾರಿ ಆಡಿದ್ದರು. ಆ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ವೃತ್ತಿಬದುಕು ಮುಂದುವರಿಸಿದ್ದರು.2000-01ರಲ್ಲಿ ಬರೋಡಾ ಪರ ಚೊಚ್ಚಲ ಪಂದ್ಯ ಆಡಿದ್ದರು. ಬಳಿಕ ರಾಜ್ಯ ತಂಡದ ನಾಯಕತ್ವವನ್ನು ವಹಿಸಿದ್ದರು. 2018ರ ಮಾರ್ಚ್‌ನಲ್ಲಿ ಜಮ್ಮು-ಕಾಶ್ಮೀರ ರಣಜಿ ತಂಡದ ಆಟಗಾರ ಹಾಗೂ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದರು.

 ಇರ್ಫಾನ್ 2006ರಲ್ಲಿ ಹರ್ಭಜನ್ ಸಿಂಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದರು. ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇರ್ಫಾನ್ ಈ ಸಾಧನೆ ಮಾಡಿದ್ದರು. 2007ರ ಸೆಪ್ಟಂಬರ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಶ್ವಕಪ್ ಗೆದ್ದುಕೊಟ್ಟ ಇರ್ಫಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ದ.ಆಫ್ರಿಕಾದಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಟಿ-20 ವಿಶ್ವಕಪ್‌ನಲ್ಲಿ ಇರ್ಫಾನ್ ಒಟ್ಟು 10 ವಿಕೆಟ್‌ಗಳನ್ನು ಪಡೆದಿದ್ದು, ಇದರಲ್ಲಿ ಫೈನಲ್‌ನಲ್ಲಿ ಪಾಕ್ ವಿರುದ್ಧದ 16 ರನ್‌ಗೆ 3 ವಿಕೆಟ್ ಕೂಡ ಸೇರಿದೆ.

2007ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದರು. 2007-08ರಲ್ಲಿ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಪಠಾಣ್ ಭಾರತಕ್ಕೆ ಐತಿಹಾಸಿಕ ಗೆಲುವು ತಂದಿದ್ದರು. ಪರ್ತ್ ಟೆಸ್ಟ್‌ನಲ್ಲಿ ಇರ್ಫಾನ್ 5 ವಿಕೆಟ್‌ಗಳನ್ನು ಪಡೆದಿದ್ದಲ್ಲದೆ ಎರಡು ಇನಿಂಗ್ಸ್‌ನಲ್ಲಿ 28 ಹಾಗೂ 46 ರನ್ ಗಳಿಸಿದ್ದರು.

 ಇರ್ಫಾನ್ 2016ರ ತನಕ ಐಪಿಎಲ್‌ನಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್, ಗುಜರಾತ್ ಲಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಕಳೆದ ಎರಡು ವರ್ಷಗಳಿಂದ ವೀಕ್ಷಕವಿವರಣೆಗಾರನಾಗಿ ಖ್ಯಾತಿ ಪಡೆದಿರುವ ಇರ್ಫಾನ್ ಹಿಂದಿಯಲ್ಲಿ ಕ್ರಿಕೆಟ್ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಡೋದರದಲ್ಲಿ ತನ್ನ ಸಹೋದರ ಯೂಸುಫ್ ಪಠಾಣ್ ಜೊತೆಗೂಡಿ ಕ್ರಿಕೆಟ್ ಅಕಾಡಮಿಯನ್ನು ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News